ನವದೆಹಲಿ, ಮೇ. 18(DaijiworldNews/AA): ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾದಾಗಿನಿಂದ ಇದುವರೆಗೆ ದೇಶಾದ್ಯಂತ ನಗದು, ಮದ್ಯ, ಡ್ರಗ್ಸ್, ಉಚಿತ ಉಡುಗೊರೆ ಸೇರಿದಂತೆ ಸುಮಾರು 9,000 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಭಾರತೀಯ ಚುನಾವಣಾ ಆಯೋಗ ವಶಕ್ಕೆ ಪಡೆದಿದೆ.
ಮಾರ್ಚ್ 1 ರಿಂದ ಇದುವರೆಗೆ ವಶಕ್ಕೆ ಪಡೆಯಲಾದ ವಸ್ತುಗಳ ಒಟ್ಟು ವಿವರವನ್ನು ನೀಡಿದ ಚುನಾವಣಾ ಆಯೋಗ, 75 ವರ್ಷಗಳ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 2019ರ ಲೋಕಸಭಾ ಚುನಾವಣೆ ವೇಳೆ ಒಟ್ಟು 3,475 ಕೋಟಿ ರೂ. ಮೌಲ್ಯದ ನಗದು, ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು. ಆದರೆ ಬಾರಿ ಇನ್ನೂ 3 ಹಂತದ ಚುನಾವಣೆಗಳು ಬಾಕಿಯಿರುವಂತೆಯೇ ಹಿಂದಿನ ದಾಖಲೆಯು ಮುರಿದಿದೆ ಎಂದು ತಿಳಿಸಿದೆ.
ಒಟ್ಟಾರೆ ದೇಶಾದ್ಯಂತ ಏಜೆನ್ಸಿಗಳು 8,889 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿವೆ. ಈ ಪೈಕಿ ಡ್ರಗ್ಸ್ ಪಾಲು ಶೇ. 45, ಅಂದರೆ ಸುಮಾರು 3,958 ಕೋಟಿ ರೂ.ಗಳಷ್ಟಿದೆ. 849.15 ಕೋಟಿ ರೂ. ನಗದು, 814.85 ಕೋಟಿ ರೂ. ಮೌಲ್ಯದ 5.39 ಕೋಟಿ ಲೀ. ಮದ್ಯ, 1,200.33 ಕೋಟಿ ರೂ. ಮೌಲ್ಯದ ಲೋಹಗಳು, 2,006.56 ಕೋಟಿ ರೂ. ಉಚಿತ ಉಡುಗೊರೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.