ಹುಬ್ಬಳ್ಳಿ, ಮೇ07(Daijiworld News/SS): ಸಿದ್ದರಾಮಯ್ಯ ನಮ್ಮ ನಾಯಕರು, ನಾವು ಅವರನ್ನು ಮೂಲೆ ಗುಂಪು ಮಾಡುವ ಮಾತೇ ಇಲ್ಲಾ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಪ್ರಚಾರ ವೇಳೆ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ ಅವರು, ನಾವೆಲ್ಲಾ ಸೇರಿ ಸಿದ್ದರಾಮಯ್ಯ ಅವರ ಕೈ ಬಲಪಡಿಸುತ್ತೆವೆ. ಸರ್ಕಾರ ಸುಭದ್ರವಾಗಿದೆ ಮುಂದೆಯೂ ಇರಲಿದೆ. ರಾಜಕೀಯ ಚದುರಂಗ ಆಟದ ಬಗ್ಗೆ ಮೇ 23ರ ನಂತರ ಎಲ್ಲವೂ ಗೊತ್ತಾಗಲಿದೆ ಎಂದು ಹೇಳಿದರು.
ಕುಂದಗೋಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಸಚಿವ ಡಿ.ಕೆ.ಶಿವಕುಮಾರ್ ರಾಜಕೀಯ ಪಾಠ ಮಾಡಿದ್ದು, ಸುಮ್ಮನೆ ಬಿಳಿ ಬಟ್ಟೆ ತೊಟ್ಟರೆ ಲೀಡರ್ ಆಗಲ್ಲ. ಯಾರು ತಮ್ಮ ತಮ್ಮ ಬೂತ್ಗಳಲ್ಲಿ ಲೀಡ್ ತಂದು ಕೊಡುತ್ತಾರೋ ಅವರು ನಿಜವಾದ ನಾಯಕರು ಎಂದು ಹೇಳಿದರು.
ಇದು ಸಿ.ಎಸ್.ಶಿವಳ್ಳಿಯವರ ಚುನಾವಣೆ, ಅವರು ಮಾಡಿದ ಅಭಿವೃದ್ಧಿ ಕೆಲಸಗಳನ್ನ ಇಟ್ಟುಕೊಂಡು ಚುನಾವಣೆ ಮಾಡುತ್ತೇವೆ. ಬಿಜೆಪಿಯ ಸ್ಥಳೀಯ ನಾಯಕರಿಗೆ ಆಹ್ವಾನ ಕೊಡುತ್ತೇನೆ, ನಮ್ಮ ಪಕ್ಷದ ಜೊತೆಗೆ ನೀವು ಕೈ ಜೋಡಿಸಬೇಕು. ಈ ಚುನಾವಣೆ ನಡೆಯುತ್ತಿರುವುದು, ಮೋದಿಗಾಗಿ ಅಲ್ಲ. ಇಲ್ಲಿ ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಅಭ್ಯರ್ಥಿಗಳಲ್ಲ ಎಂದು ಹೇಳಿದ್ದಾರೆ.
ಬಿಳಿ ಬಟ್ಟೆ ತೊಟ್ಟು ನನ್ನ ಜೊತೆ ಬಂದರೆ ನಾನು ಅವರನ್ನು ನಂಬಲ್ಲ. ಕ್ಷೇತ್ರದ ಪ್ರತಿ ಮತಗಟ್ಟೆಗಳಲ್ಲಿ ಲೀಡ್ ತಂದು ಕೊಟ್ಟವರು ನನ್ನ ತರಹ ಲೀಡರ್ ಆಗುತ್ತಾರೆ. ಯಾರು ಏನೇ ಹೇಳಿದರು ನೀವು ಎಲ್ಲರ ಮನೆಗೆ ಹೋಗಿ ಪ್ರಚಾರ ಮಾಡಬೇಕು. ಕ್ಷೇತ್ರದಲ್ಲಿ ಕುಸುಮಾ ಶಿವಳ್ಳಿಯವರನ್ನ ಗೆಲ್ಲಿಸುವುದು ನಮ್ಮ ಜವಾಬ್ದಾರಿ ಎಂದು ತಿಳಿಸಿದರು.