ಹರಿಯಾಣ, ಮೇ.19(DaijiworldNews/AK): ಧೃಡ ಸಂಕಲ್ಪ ಹಾಗೂ ನಿರ್ದಿಷ್ಟ ಗುರಿ ಇದ್ದರೆ ಸಾಕು ಎಷ್ಟೇ ಕಷ್ಟ ಆದರೂ ಅದನ್ನು ಸಾಧಿಸುತ್ತೇವೆ. ಹೀಗೆ ಮೂರು ಬಾರಿ ಯುಪಿಎಸ್ ಸಿ ಪರೀಕ್ಷೆ ಬರೆದು ಅನುತ್ತೀರ್ಣರಾದರೂ ಸಹ ನಾಲ್ಕನೇ ಬಾರಿಗೆ ಪರೀಕ್ಷೆ ಬರೆದು ಉತ್ತೀರ್ಣರಾಗಿ ಐಎಎಸ್ ಅಧಿಕಾರಿಯಾದ ಅಭಿಲಾಷಾ ಶರ್ಮಾ ಅವರ ಯಶೋಗಾಥೆ ಇದು.
ಮೂಲತಃ ಹರಿಯಾಣದವರಾದ ಅಭಿಲಾಷಾ ಅವರು ಪ್ರಸ್ತುತ ಗುರುಗ್ರಾಮ್ನಲ್ಲಿ ನೆಲೆಸಿದ್ದಾರೆ. ಅಭಿಲಾಷಾ ಅವರು ಯುಪಿಎಸ್ ಸಿ ಪರೀಕ್ಷೆ ಬರೆಯುವ ನಿರ್ಧಾರ ಮಾಡಿದರು. ಹೀಗಾಗಿ 2013 ರಲ್ಲಿ ಯುಪಿಎಸ್ ಸಿ ಪರೀಕ್ಷೆಗೆ ಅಧ್ಯಯನವನ್ನು ಪ್ರಾರಂಭಿಸುತ್ತಾರೆ. ಆದರೆ ಅಭಿಲಾಷಾ ಅವರು ಮೂರು ಬಾರಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುತ್ತಾರೆ.
ಮೂರು ಬಾರಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ವಿಫಲಗೊಂಡ ನಂತರ ಹತಾಶೆ ಮತ್ತು ನಿರಾಶೆಯಿಂದ ಐಎಎಸ್ ಅಧಿಕಾರಿಯಾಗುವ ಭರವಸೆ ಅಭಿಲಾಷಾಳಲ್ಲಿ ಮುಚ್ಚಿ ಹೋಗಿತ್ತು.
ಆದರೆ, ಇದರಿಂದ ಕಂಗೆಡದ ಅಭಿಲಾಷಾ ಮತ್ತೆ ಯುಪಿಎಸ್ ಸಿ ಪರೀಕ್ಷೆ ಬರೆಯುವ ನಿರ್ಧಾರ ಮಾಡುತ್ತಾರೆ. ಈ ಬಾರಿ ಅವರು ಕಟ್ಟುನಿಟ್ಟಾದ ವೇಳಾಪಟ್ಟಿಯನ್ನು ಮಾಡಿಕೊಳ್ಳುತ್ತಾರೆ ಮತ್ತು ದಿನಕ್ಕೆ 15 ರಿಂದ 16 ಗಂಟೆಗಳ ಕಾಲ ಅಧ್ಯಯನ ಮಾಡಲು ಪ್ರಾರಂಭಿಸುತ್ತಾರೆ.
ಅಭಿಲಾಷಾ ಅವರು ನಾಲ್ಕನೇ ಬಾರಿಗೆ ಯುಪಿಎಸ್ ಸಿ ಪರೀಕ್ಷೆ ಬರೆಯುತ್ತಾರೆ. ಈ ಬಾರಿ ಅವರು 68ನೇ ರ್ಯಾಂಕ್ ಗಳಿಸುವ ಮೂಲಕ ಐಎಎಸ್ ಅಧಿಕಾರಿಯಾಗುತ್ತಾರೆ. ಈ ಮೂಲಕ ಎಲ್ಲಾ ಯುಪಿಎಸ್ ಸಿ ಅಭ್ಯರ್ಥಿಗಳಿಗೆ ಅಭಿಲಾಷಾ ಅವರು ಮಾದರಿಯಾಗಿದ್ದಾರೆ.