ಬೆಂಗಳೂರು, ಮೇ.19(DaijiworldNews/AK): ಪೆನ್ಡ್ರೈವ್ ಕೇಸಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಸಂಕಷ್ಟ ಎದುರಾಗಿದೆ. ಹೊಳೆನರಸೀಪುರ ಕೇಸಲ್ಲಿ ಪಾಸ್ಪೋರ್ಟ್ ರದ್ದು ಮಾಡಲು ಕೋರ್ಟ್ ಅನುಮತಿ ನೀಡಿದೆ. ಅಲ್ಲದೆ, ಅರೆಸ್ಟ್ ವಾರೆಂಟ್ಗೆ ಎಸ್ಐಟಿಗೆ ಅನುಮತಿ ಪಡೆದಿದೆ.
ಎಸ್ಐಟಿಗೂ ಸಿಗದೇ ತಲೆಮರೆಸಿಕೊಂಡಿರುವ ಪ್ರಜ್ವಲ್ ವಿದೇಶದಲ್ಲೇ ವಾಸ್ತವ್ಯ ಹೂಡಿದ್ದಾರೆ. ಭೂಗತವಾಗೇ ಇದ್ದು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಹಾಗಾಗಿ ಏನೇ ಆಗಲಿ ಪ್ರಜ್ವಲ್ನನ್ನು ಬಂಧಿಸಲೇಬೇಕು ಎಂದು ಎಸ್ಐಟಿ ಪಣ ತೊಟ್ಟಿದೆ.
ಅದರಂತೆ 42ನೇ ಎಸಿಎಂಎಂ ಕೋರ್ಟ್, ಪ್ರಜ್ವಲ್ ರೇವಣ್ಣ ವಿರುದ್ಧ ಅರೆಸ್ಟ್ ವಾರಂಟ್ ಜಾರಿ ಮಾಡಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ಹೊರಡಿಸಿದ್ದ ನೋಟಿಸ್ಗಳ ಬಗ್ಗೆ ಕೋರ್ಟ್ ಮಾಹಿತಿ ಕೇಳಿತ್ತು. ಈ ವೇಳೆ ಲುಕ್ ಔಟ್ ನೋಟಿಸ್, ಬ್ಲೂ ಕಾರ್ನರ್ ನೋಟಿಸ್ ನೀಡಿರುವ ಬಗ್ಗೆ ಎಸ್ಐಟಿ ಮಾಹಿತಿ ನೀಡಿದೆ. ಇದೀಗ ಕೋರ್ಟ್ ಅರೆಸ್ಟ್ ವಾರಂಟ್ ಜಾರಿ ಮಾಡಿದೆ.
ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣಗೆ ವಿಚಾರಣೆಗೆ ಹಾಜರಾಗಲು ಈಗಾಗಲೇ ಎಸ್ಐಟಿ ಲುಕ್ಔಟ್ ನೋಟಿಸ್ ಹಾಗೂ ಬ್ಲೂ ಕಾರ್ನರ್ ನೋಟಿಸ್ ನೀಡಿತ್ತು. ಇದೀಗ ಅರೆಸ್ಟ್ ವಾರೆಂಟ್ ಲಭಿಸಿರುವುದರಿಂದ ಸಿಬಿಐ ಮೂಲಕ ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಎಸ್ಐಟಿ ಸಿದ್ಧತೆ ನಡೆಸುತ್ತಿದೆ. ರೆಡ್ ಕಾರ್ನರ್ ನೋಟಿಸ್ ಬಳಿಕ ಪ್ರಜ್ವಲ್ ಪಾಸ್ಪೋರ್ಟ್ ರದ್ದು ಆಗಲಿದ್ದು, ಇದರಿಂದ ಬಂಧನಕ್ಕೆ ಸಹಕಾರಿಯಾಗಲಿದೆ.