ಬೆಂಗಳೂರು, ಮೇ.19(DaijiworldNews/AK): ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಕಿ ಇಲ್ಲದೇ ಹೊಗೆಯಾಡಲ್ಲ ಎಂದು ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ಮಾಡಿದ್ದಾರೆ.
ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಪೆನ್ಡ್ರೈವ್ ಕೊಟ್ಟರು ಅಂತ ಹೇಳು. ಅದಕ್ಕಾಗಿ ಆಫರ್ ಕೊಟ್ಟಿದ್ದಾರೆ ಎಂಬ ದೇವರಾಜೇಗೌಡ ಹೇಳಿಕೆ ವಿಚಾರವಾಗಿ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರನ್ನ ಭೇಟಿ ಮಾಡಿ ಬಳಿಕ ಮಾತನಾಡಿದ ಅವರು, ದೇವರಾಜೇಗೌಡ ಹೇಳಿರುವುದು ನೂರಕ್ಕೆ ನೂರು ಸತ್ಯ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿಗೆ ಕೆಟ್ಟ ಹೆಸರು ತರಲು ಮಾಡಿರುವ ಪ್ಲ್ಯಾನ್. ಒಕ್ಕಲಿಗರನ್ನ ಮುಗಿಸಲು ಕಾಂಗ್ರೆಸ್ ಪಕ್ಷ ಹೊರಟಿದೆ. ಪೆನ್ಡ್ರೈವ್ ಕೇಸ್ ತನಿಖೆಗೆ ಸಿಬಿಐಗೆ ವಹಿಸಬೇಕು. ಆದರೆ ಸಿಬಿಐಗೆ ವಹಿಸುವುದಕ್ಕೆ ಅವರಿಗೆ ಭಯ. ಸಿಬಿಐ ತನಿಖೆ ಆದರೆ ಸರ್ಕಾರದವರು ಒಳಗೆ ಹೋಗುತ್ತಾರೆ. SIT ತನಿಖೆ ಅಂದರೆ ಸರ್ಕಾರದ ಪ್ರಾಯೋಜಿತ ತನಿಖೆ ಎಂದು ಕಿಡಿಕಾರಿದ್ದಾರೆ.
ತಪ್ಪು ಮಾಡಿದವರ ಮೇಲೆ ಕ್ರಮಕೈಗೊಳ್ಳಿ ಅಭ್ಯಂತರವಿಲ್ಲ. ಆದ್ರೆ, ಪೆನ್ಡ್ರೈವ್ ಹಂಚಿದವರ ಬಗ್ಗೆಯೂ ತನಿಖೆ ಆಗಲಿ. ನ್ಯಾಯಾಂಗ ತನಿಖೆ ಆದ್ರೆ ಮಾತ್ರ ಸತ್ಯ ಹೊರಬರುತ್ತದೆ ಇಲ್ಲದಿದ್ರೆ ಸತ್ಯ ಮುಚ್ಚಿಹಾಕುವ ಕೆಲಸ ಆಗುತ್ತೆ ಎಂದು ಹೇಳಿದ್ದಾರೆ.
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರ ಹುಟ್ಟುಹಬ್ಬ ಹಿನ್ನೆಲೆ ಭೇಟಿ ಮಾಡಿದ್ದು, ಶುಭ ಕೋರಿದ್ದಾರೆ. ಹೆಚ್.ಡಿ.ದೇವೇಗೌಡರ ಆಶೀರ್ವಾದ ಪಡೆದಿದ್ದಾರೆ. ಇದೇ ವೇಳೆ ಹೆಚ್ಡಿ ಕುಮಾರಸ್ವಾಮಿ, ರೇವಣ್ಣರನ್ನು ಭೇಟಿ ಮಾಡಿದ್ದಾರೆ. ಬಳಿಕ ಪ್ರತಿಕ್ರಿಯಿಸಿದ್ದು, ಇವತ್ತು ದೇವೇಗೌಡರನ್ನ ಭೇಟಿ ಮಾಡಿದ್ದೇನೆ. ಚೆನ್ನಾಗಿ, ಆರೋಗ್ಯವಾಗಿದ್ದಾರೆ. ಕೆಲ ರಾಜಕೀಯ ವಿಚಾರಗಳ ಬಗ್ಗೆ ಮಾತಾಡಿದ್ದೇನೆ. ಒಂದು ವರ್ಷ ಆಯ್ತು ಸರ್ಕಾರ ಬಂದು ಯಾವುದೇ ಅಭಿವೃದ್ಧಿಯಾಗಿಲ್ಲ. ಯಾವ ಹಳ್ಳಿಯಲ್ಲೂ ಕೆಲಸ ಕಾರ್ಯ ಆಗಿಲ್ಲ. ಒಂದೇ ಒಂದು ಕೆಲಸ ಆಗಿಲ್ಲ ಅಂತ ಬೇಸರ ಹೊರಹಾಕಿದ್ದಾರೆ ಎಂದರು.
ಶಿವರಾಮೇಗೌಡ ಆರೋಪ ವಿಚಾರವಾಗಿ ಮಾತನಾಡಿದ್ದು, ಅವರು ಏನ್ ಮಾತಾಡಿದ್ದಾರೋ ಗೊತ್ತಿಲ್ಲ. ಅವರು ನಮ್ಮ ಪಕ್ಷದಿಂದ ಹೊರ ಹೋಗಿದ್ದಾರೆ. ದೇವರಾಜೇಗೌಡ ಹೇಳಿದ್ದಾರೆ, ನನಗೆ ದುಡ್ಡು ಆಫರ್ ಮಾಡಿದ್ದಾರೆ ಎಂದಿದ್ದಾರೆ. ಅದಕ್ಕೆ ಸಂಬಂಧಿಸಿದ ದಾಖಲೆ ಬಿಡುಗಡೆ ಮಾಡಿದ್ದಾರೆ ಎಂದರು.