ಚಂಡೀಗಢ, ಮೇ 20(DaijiworldNews/AA): ಯುಪಿಎಸ್ ಸಿ ಪರೀಕ್ಷೆಯು ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಈ ಪರೀಕ್ಷೆಯನ್ನು ಕೆಲವೇ ಕೆಲವು ಮಂದಿ ಮಾತ್ರ ತಮ್ಮ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗುತ್ತಾರೆ. ಹೀಗೆ ತಮ್ಮ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿ ಐಎಎಸ್ ಅಧಿಕಾರಿಯಾದ ಚಂದ್ರಜ್ಯೋತಿ ಸಿಂಗ್ ಅವರ ಯಶೋಗಾಥೆ ಇದು.
ಚಂದ್ರಜ್ಯೋತಿ ಸಿಂಗ್ ಅವರು ನಿವೃತ್ತ ಸೇನಾಧಿಕಾರಿ ಕರ್ನಲ್ ದಲ್ಬರಾ ಸಿಂಗ್ ಮತ್ತು ಲೆಫ್ಟಿನೆಂಟ್ ಕರ್ನಲ್ ಮೀನ್ ಸಿಂಗ್ ಅವರ ಪುತ್ರಿ. ಹೀಗಾಗಿ ಚಂದ್ರಜ್ಯೋತಿ ಅವರು ಸ್ಫೂರ್ತಿದಾಯಕ ವಾತಾವರಣದಲ್ಲಿ ಬೆಳೆಯುತ್ತಾರೆ. ಜೊತೆಗೆ ಚಿಕ್ಕಂದಿನಿಂದಲೇ ಪೋಷಕರು ಆಕೆಗೆ ದೃಢತೆ ಮತ್ತು ಬದ್ಧತೆಯನ್ನು ಕಲಿಸುತ್ತಾರೆ.
ಚಂದ್ರಜ್ಯೋತಿ ಸಿಂಗ್ ಅವರು ಶೈಕ್ಷಣಿಕವಾಗಿ ಉತ್ತಮ ಸಾಧನೆಯನ್ನು ಮಾಡಿದ್ದಾರೆ. ಜಲಂಧರ್ನ ಎಪಿಜೆ ಶಾಲೆಯಲ್ಲಿ ಶಿಕ್ಷಣ ಪಡೆದ ಅವರು 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ 10 ಸಿಜಿಪಿಎ ಗಳಿಸುತ್ತಾರೆ. ಚಂಡೀಗಢದಲ್ಲಿನ ಚಂಡೀಗಢ ಭವನ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ ಅವರು, 12 ನೇ ತರಗತಿ ಪರೀಕ್ಷೆಯಲ್ಲಿ ಶೇಕಡ 95.4 ಅಂಕ ಗಳಿಸುತ್ತಾರೆ. ದೆಹಲಿ ವಿಶ್ವವಿದ್ಯಾಲಯದ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದ ಅವರು 7.75 ಸಿಜಿಪಿಎ ಗಳಿಸುವ ಮೂಲಕ ಗೌರವ ಪದವಿ ಗಳಿಸುತ್ತಾರೆ. ಜೊತೆಗೆ ಇತಿಹಾಸ ವಿಷಯದಲ್ಲಿ ಅವರು ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ.
ಮಿಲಿಟರಿ ಕುಟುಂಬದಿಂದ ಬಂದ ಚಂದ್ರಜ್ಯೋತಿ ಸಿಂಗ್ ಅವರಿಗೆ ಸಹಜವಾಗಿ ಜನರ ಸೇವೆ ಮಾಡಬೇಕೆಂಬ ಮನಸ್ಸಾಗುತ್ತದೆ. ಹೀಗಾಗಿ ತನ್ನ ಶಿಕ್ಷಣ ಮುಗಿದ ಬಳಿಕ ಯುಪಿಎಸ್ ಸಿ ಪರೀಕ್ಷೆ ಬರೆಯಲು ನಿರ್ಧಾರ ಮಾಡುತ್ತಾರೆ. ಪ್ರತಿದಿನ 6-8 ಗಂಟೆಗಳ ಕಾಲ ಪರೀಕ್ಷೆಗಾಗಿ ಅಧ್ಯಯನ ಮಾಡುತ್ತಿದ್ದರು. ಆದರೆ ಪರೀಕ್ಷಾ ದಿನಗಳು ಸಮೀಪಿಸುತ್ತಿದ್ದಂತೆ ದಿನಕ್ಕೆ 10 ಗಂಟೆಗಳ ಕಾಲ ಅಧ್ಯಯನ ಮಾಡಲು ಪ್ರಾರಂಭಿಸುತ್ತಾರೆ. ತಮ್ಮ 22ನೇ ವರ್ಷದಲ್ಲೇ ಮೊದಲ ಪ್ರಯತ್ನದಲ್ಲೇ 28ನೇ ರ್ಯಾಂಕ್ ನೊಂದಿಗೆ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ.