ಬೆಂಗಳೂರು, ಮೇ 20(DaijiworldNews/AK):ಕಳೆದೊಂದು ವರ್ಷದ ಈ ರಾಜ್ಯ ಸರಕಾರದ ಸಾಧನೆ ಶೂನ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆರೋಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದು ವರ್ಷದಲ್ಲಿ ಒಂದೇ ಒಂದು ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿಲ್ಲ. ಗುದ್ದಲಿ ಪೂಜೆಯ ಉದಾಹರಣೆಯೂ ಇಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.
ಸ್ಪಷ್ಟ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದರು. ಈ ಸರಕಾರ ಬಂದ ಬಳಿಕ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಆಶಯ ಜನರದ್ದಾಗಿತ್ತು. ನುಡಿದಂತೆ ನಡೆಯುವ ಸರಕಾರ ಎಂದು ಕಾಂಗ್ರೆಸ್ಸಿಗರು ತಮ್ಮ ಬೆನ್ನನ್ನು ತಾವು ತಟ್ಟಿಕೊಳ್ಳುತ್ತಿದ್ದಾರೆ. ಹೊಗಳುಭಟರು, ಜಾಹೀರಾತಿನ ಮೂಲಕ ತಮ್ಮನ್ನು ತಾವು ಹೊಗಳಿಸಿಕೊಳ್ಳುವುದು ಮತ್ತು ಅಭಿವೃದ್ಧಿ ಆಗಿದೆ ಎಂದು ಬಿಂಬಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ರಾಜ್ಯದ ಕಾಂಗ್ರೆಸ್ ಸರಕಾರದ ಒಂದು ವರ್ಷದ ಸಾಧನೆ ಬಗ್ಗೆ ಮುಖ್ಯಮಂತ್ರಿಗಳು, ಸಚಿವರು ಮಾತನಾಡುತ್ತಿದ್ದಾರೆ. ಮತ್ತೊಂದು ಕಡೆ ಬಿಜೆಪಿ ಜೊತೆ ಜೊತೆಗೇ ಈ ನಾಡಿನ ಜನಸಾಮಾನ್ಯರೂ ಸಹ ರಾಜ್ಯ ಸರಕಾರ ಕಳೆದ ಒಂದು ವರ್ಷದಲ್ಲಿ ಏನು ಸಾಧನೆ ಮಾಡಿದೆ ಎಂದು ಅನೇಕ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಎಂದು ವಿಶ್ಲೇಷಿಸಿದರು.
ಗ್ಯಾರಂಟಿಯೇ ಅಭಿವೃದ್ಧಿಯೇ ಎಂದು ಬಿಂಬಿಸಲಾಗುತ್ತಿದೆ. ಬರಗಾಲದ ವಿಚಾರದಲ್ಲಿ ಸರಕಾರದ ನಡವಳಿಕೆ ಅಕ್ಷಮ್ಯ ಅಪರಾಧ. ಕೇಂದ್ರ ಸರಕಾರದಿಂದ ಅನುದಾನ ಬಂದಿಲ್ಲ ಎಂದು ಹೋರಾಟ ಮಾಡಿದರು. ಆದರೆ, ಚುನಾಯಿತ ಸರಕಾರದ ಜವಾಬ್ದಾರಿ, ಮುಖ್ಯಮಂತ್ರಿಗಳ ಹೊಣೆಯನ್ನು ನಿಭಾಯಿಸುತ್ತಿದ್ದಾರೆ ಎಂದು ರೈತರಿಗೆ ಯಾವತ್ತೂ ಅನಿಸಿಲ್ಲ ಎಂದು ಬಿ.ವೈ.ವಿಜಯೇಂದ್ರ ಅವರು ಆಕ್ಷೇಪ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳ ಮಾತನ್ನು ಕೇಳಿದರೆ, ಗ್ಯಾರಂಟಿಯೇ ಈ ರಾಜ್ಯದ ಅಭಿವೃದ್ಧಿ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕಳೆದ ಒಂದು ವರ್ಷದಲ್ಲಿ ಗ್ಯಾರಂಟಿಗೆ ಪ್ರಚಾರ ಕೊಟ್ಟು, ಅದರ ಮೂಲಕ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಆಗಿದೆ ಎಂದು ಬಿಂಬಿಸುವ ಪ್ರಯತ್ನವನ್ನು ರಾಜ್ಯ ಸರಕಾರ ಮಾಡುತ್ತಿದೆ ಎಂದು ಟೀಕಿಸಿದರು.
ಬರಗಾಲದ ಸಂದರ್ಭದಲ್ಲೂ 7 ತಾಸು ವಿದ್ಯುತ್ ಕೊಡದ ನಿಷ್ಕ್ರಿಯ ಸರಕಾರ ಇಲ್ಲಿದೆ ಎಂದು ದೂರಿದರು.ಲೋಕಸಭಾ ಚುನಾವಣೆ ಫಲಿತಾಂಶ ಬಂದ ಬಳಿಕ ಈ ಸರಕಾರದ ಹಣೆಬರಹ ಗೊತ್ತಾಗಲಿದೆ. ಮೋದಿಜೀ ಅವರ ಮೋದಿ ಗ್ಯಾರಂಟಿ ಬಗ್ಗೆ ಜನತೆ ಭರವಸೆ ಇಟ್ಟು ಆಶೀರ್ವಾದ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸರಕಾರವು ಅಭಿವೃದ್ಧಿಯ ಕಡೆ ಗಮನ ಕೊಡಬೇಕು; ಕಾನೂನು- ಸುವ್ಯವಸ್ಥೆ ಕಾಪಾಡಬೇಕು ಎಂದು ಆಗ್ರಹಿಸಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಅವರು ಉಪಸ್ಥಿತರಿದ್ದರು.