National
'ಗ್ಯಾರಂಟಿಗಳ ಹೊರತಾಗಿ ಅಭಿವೃದ್ಧಿಗೂ ಹಣ ಮೀಸಲಿಟ್ಟು ಖರ್ಚು ಮಾಡಿದ್ದೇವೆ '- ಸಿಎಂ
- Mon, May 20 2024 02:45:51 PM
-
ಬೆಂಗಳೂರು, ಮೇ 20(DaijiworldNews/AK):ಬಿಜೆಪಿಯ ನಿರಂತರ ಅಪಪ್ರಚಾರದ ನಡುವೆಯೂ ಗ್ಯಾರಂಟಿಗಳು ಜನರ ಮನೆ ಮನೆ ತಲುಪಿವೆ. ಗ್ಯಾರಂಟಿಗಳ ಹೊರತಾಗಿ ಅಭಿವೃದ್ಧಿಗೂ ಹಣ ಮೀಸಲಿಟ್ಟು ಖರ್ಚು ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಕಿ ಅಂಶಗಳ ಸಮೇತ ವಿವರಿಸಿದರು.
ಸರ್ಕಾರಕ್ಕೆ ವರ್ಷ ಪೂರೈಸಿದ ಸಂದರ್ಭದಲ್ಲಿ ಬೆಂಗಳೂರು ಪ್ರೆಸ್ ಕ್ಲಬ್ ಆಯೋಜಿಸಿದ್ದ ಮೀಟ್ ದ ಪ್ರೆಸ್ ನಲ್ಲಿ ಮಾತನಾಡಿದ ಅವರು,ವಿಜಯೇಂದ್ರ, ಆರ್.ಅಶೋಕ್ ಗೆ ಆರ್ಥಿಕತೆ ಅರ್ಥ ಆಗಲ್ಲ. ಹೀಗಾಗಿ ಖಜಾನೆ ಖಾಲಿ ಆಗಿದೆ ಎಂದು ಪರಮ ಸುಳ್ಳು ಹೇಳುತ್ತಿದ್ದಾರೆ. ನಾವು ಗ್ಯಾರಂಟಿಯೇತರ ಅಭಿವೃದ್ಧಿ ಕಾರ್ಯಗಳಿಗೆ54374 ಕೋಟಿ ಖರ್ಚು ಮಾಡುವುದಾಗಿ ಬಜೆಟ್ ನಲ್ಲಿ ಹೇಳಿದ್ದೆವು. ಆದರೆ 56274 ಕೋಟಿ ಖರ್ಚು ಮಾಡಿದೆವು. ಅಂದರೆ ಬಜೆಟ್ ನಲ್ಲಿ ಹೇಳಿದ್ದಕ್ಕಿಂತ ಹೆಚ್ಚು ಖರ್ಚು ಮಾಡಿದ್ದೇವೆ ಎಂದು ಅಂಕಿ ಅಂಶಗಳ ಸಮೇತ ವಿವರಿಸಿದರು.
ನೀರಾವರಿಗೆ 16360 ಕೋಟಿ ಖರ್ಚು ಮಾಡುವುದಾಗಿ ಬಜೆಟ್ ನಲ್ಲಿ ಹೇಳಿದ್ದೆವು. ಆದರೆ 18198 ಕೋಟಿ ಖರ್ಚು ಮಾಡಿದೆವು. ಹೇಳಿದ್ದಕ್ಕಿಂತ ಹೆಚ್ಚು ಖರ್ಚು ಮಾಡಿದ್ದೇವೆ.ಲೋಕೋಪಯೋಗಿ ಇಲಾಖೆಗೂ 9661 ಕೋಟಿ ಖರ್ಚು ಮಾಡಿದ್ದೇವೆ. ಬಿಜೆಪಿಯವರ ಹೇಳಿಕೆಯಂತೆ ಖಜಾನೆ ಖಾಲಿ ಆಗಿದ್ದರೆ ಇಷ್ಟೆಲ್ಲಾ ಖರ್ಚು ಮಾಡಲು ಸಾಧ್ಯವಿತ್ತೇ ಎಂದು ಪ್ರಶ್ನಿಸಿದರು.
ಸಮಾಜ ಕಲ್ಯಾಣಕ್ಕಾಗಿ ಪರಿಶಿಷ್ಟ ಜಾತಿ/ವರ್ಗದ ಗುತ್ತಿಗೆದಾರರಿಗೆ ಒಂದು ಕೋಟಿವರೆಗಿನ ಕಾಮಗಾರಿಗೆ ಮೀಸಲಾತಿ, ಹಿಂದುಳಿದವರಿಗೆ ಮೀಸಲಾತಿ ನೀಡಿದೆವು. SCSP/TSP ಕಾಯ್ದೆ ಮಾಡಿದ್ದು ನಮ್ಮ ಸರ್ಕಾರ. ಮೋದಿ ಭಾಷಣದಲ್ಲಿ ಸುಳ್ಳು ಹೇಳುವುದನ್ನು ಬಿಟ್ಟು ಈ ಕಾಯ್ದೆಯನ್ನು ಬಿಜೆಪಿ ಆಡಳಿತದ ಸರ್ಕಾರಗಳು ಏಕೆ ಜಾರಿ ಮಾಡಿಲ್ಲ ಎನ್ನುವುದಕ್ಕೆ ಉತ್ತರಿಸಲಿ ಎಂದು ಸವಾಲು ಹಾಕಿದರು.
ಹಿಂದುಳಿದವರ ಮೀಸಲಾತಿ ಕಿತ್ತು ಮುಸ್ಲೀಮರಿಗೆ ಕೊಡ್ತಾರೆ ಎಂದು ಮತ್ತೊಂದು ಮೋದಿ ಸುಳ್ಳು ಹೇಳುತ್ತಿದ್ದಾರೆ. ಇದು ಅಪ್ಪಟ ಸುಳ್ಳು.ಚಿನ್ನಪ್ಪರೆಡ್ಡಿ ಆಯೋಗದ ವರದಿಯಂತೆ 30 ವರ್ಷದಿಂದ ರಾಜ್ಯದಲ್ಲಿ ಮುಸ್ಲಿಂ ಮೀಸಲಾತಿ ಜಾರಿಯಲ್ಲಿದೆ. ಬೊಮ್ಮಾಯಿ ಸರ್ಕಾರ ಕೂಡ ಸುಪ್ರೀಂಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸಿ ಮುಸ್ಲೀಮರ ಮೀಸಲಾತಿ ರದ್ದು ಮಾಡುವುದಿಲ್ಲ ಎಂದು ಒಪ್ಪಿಕೊಂಡಿದೆ. ಆದರೂ ಮೋದಿ ಭಾಷಣಗಳಲ್ಲಿ ಸುಳ್ಳು ಹೇಳುತ್ತಾ ತಿರುಗುತ್ತಿದ್ದಾರೆ. ನಾವು ಯಾರ ಮೀಸಲಾತಿಯನ್ನೂ ಕಿತ್ತುಕೊಂಡಿಲ್ಲ. ಹೀಗಾಗಿ ಮೋದಿ ಹೇಳುತ್ತಿರುವುದು ಅಪ್ಪಟ ಸುಳ್ಳು ಎಂದರು.
ನಮ್ಮ ಕಾಲದಲ್ಲಿ ಭ್ರಷ್ಟಾಚಾರ ಸಂಪೂರ್ಣವಾಗಿ ನಿಂತಿದೆ ಎಂದು ಹೇಳೋದಿಲ್ಲ. ಆದರೆ ಪ್ರಮಾಣ ಕಡಿಮೆ ಮಾಡಲು ನಿಷ್ಠುರವಾಗಿ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. 40% ತನಿಖೆಗೆ ಶುರು ಮಾಡಿಸಿದ್ದೇವೆ ಎಂದರು.ಇಡೀ ದೇಶದಲ್ಲಿ ಮೀಸಲಾತಿಯ ಅನುಕೂಲ ಪಡೆಯದ ಯಾವುದೇ ಜಾತಿ, ವರ್ಗಗಳಿಲ್ಲ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಷ್ಟ್ರ ಮಟ್ಟದಲ್ಲಿ ಜಾತಿ ಗಣತಿ ಮಾಡುತ್ತೇವೆ ಎಂದು ಘೋಷಿಸಿದ್ದು ಇದೇ ಕಾರಣಕ್ಕೆ. ಇದರಲ್ಲಿ ಏನು ತಪ್ಪಿದೆ ಎಂದು ಸಿಎಂ ಪ್ರಶ್ನಿಸಿದರು
52009 ಕೋಟಿ ಮುಂದಿನ ವರ್ಷದ ಗ್ಯಾರಂಟಿಗಳ ಅಭಿವೃದ್ಧಿಗೆ ಹಣ ಮೀಸಲಿಟ್ಟಿದ್ದೇವೆ. ಇದಕ್ಕಿಂತ ಹೆಚ್ಚು ಹಣ ಕೊಡ್ತೀವಿ ಎಂದರು. ಅಭಿವೃದ್ಧಿಗೆ ಹಿಂದಿನ ಸರ್ಕಾರಕ್ಕಿಂತ ಹೆಚ್ಚು ಹಣ ಮೀಸಲಿಟ್ಟಿದ್ದೇವೆ. ಹೆಚ್ವು ಹಣ ಖರ್ಚು ಮಾಡಿದ್ದೇವೆ ಎಂದರು
ಬೊಮ್ಮಾಯಿ ಬಜೆಟ್ ಗಾತ್ರಕ್ಕಿಂತ ನಮ್ಮ ಸರ್ಕಾರದ ಬಜೆಟ್ ಗಾತ್ರ ಹೆಚ್ಚಾಗಿದೆ. ನಮ್ಮ ಸರ್ಕಾರ ಪಾಪರ್ ಆಗಿದ್ದರೆ ಇದು ಸಾಧ್ಯವಿತ್ತಾ ಎಂದು ಬಿ.ಎಸ್.ಯಡಿಯೂರಪ್ಪ ಅವರ ಆರೋಪಗಳಿಗೆ ಸವಾಲು ಎಸೆದರು.
ನುಡಿದಂತೆ ನಡೆದು 7.5 ಕೋಟಿ ಜನರ ಆಶಯ ಈಡೇರಿಸಿದ್ದೇವೆ. ನಮಗೆ ಆಶೀರ್ವಾದ ಮಾಡಿ ಬಹುಮತದಿಂದ ಗೆಲ್ಲಿಸಿದ ಜನತೆಗೆ ಸಿಎಂ ಅಭಿನಂದನೆ ಸಲ್ಲಿಸಿದರು .
ಕಾನೂನು ಸುವ್ಯವಸ್ಥೆ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಕೊಲೆ ಗಳ ಪ್ರಮಾಣ ಕಡಿಮೆ ಆಗಿದೆ ಎಂದು ಅಂಕಿ ಅಂಶಗಳ ಸಮೇತ ವಿವರಿಸಿದರು. ಆದರೆ ಅಂಕಿ ಅಂಶಗಳಿಗಿಂತ ಸಮಾಜದ ಸ್ವಾಸ್ಥ್ಯ ಮುಖ್ಯ. ಹೀಗಾಗಿ ಅಧಿಕಾರಿಗಳಿಗೆ ಅಪರಾಧ ತಡೆಗಟ್ಟಲು ಕಟ್ಟು ನಿಟ್ಟಿನ ಸೂಚನೆ ನೀಡಿದ್ದೇವೆ. ಕರ್ತವ್ಯಲೋಪ ಮಾಡಿದ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಕ್ರಮ ಕೈಗೊಳ್ಳಲಾಗಿದೆ ಎಂದರು.ಕಾಂಗ್ರೆಸ್ ಸಣ್ಣ ಪುಟ್ಟ ಪಕ್ಷಗಳ ಜೊತೆ ಒಕ್ಕೂಟ ರಚಿಸಿಕೊಂಡಿದೆ ಎನ್ನುವ ಮೋದಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ, NDA ಕೂಡ ಒಕ್ಕೂಟವೇ ಆಗಿದೆ. ಅವರು ಇತರೆ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ನಾವು ಮಾಡಿಕೊಳ್ಳಬಾರದು ಎಂದರೆ ಹೇಗೆ ಎಂದು ಪ್ರಶ್ನಿಸಿದರು
ಜಾತಿ ಗಣತಿ ಜಾರಿ ಹೇಗೆ ಎನ್ನುವ ಪ್ರಶ್ನೆಗೆ , ನಾವು ಜಾತಿಗಣತಿ ವರದಿ ಸ್ವೀಕರಿಸಿದ್ದೇವೆ. ನಾವಿನ್ನೂ ವರದಿ ನೋಡಿಲ್ಲ. ಕ್ಯಾಬಿನೆಟ್ ಮುಂದೆ ಇಡ್ತೇವೆ ಎಂದರು.
ಬರ ಪರಿಹಾರಕ್ಕೆ ಕೇಂದ್ರದ ದ್ರೋಹ:
ರಾಜ್ಯ ಭೀಕರ ಪರಿಹಾರಕ್ಕೆ ತುತ್ತಾದಾಗಲೂ ರಾಜ್ಯದ ಪಾಲಿನ ಬರ ಪರಿಹಾರವನ್ನು ಕೇಂದ್ರ ಕೊಡಲಿಲ್ಲ. ಅಮಿತ್ ಶಾ, ಮೋದಿ, ನಿರ್ಮಲಾ ಸೀತಾರಾಮನ್ ಪದೇ ಪದೇ ರಾಜ್ಯಕ್ಕೆ ಬಂದು ಜನರಿಗೆ ಸುಳ್ಳು ಹೇಳಿದರು. ಆದರೆ, ಸುಪ್ರೀಂಕೋರ್ಟ್ ಎದುರು ಮಾತ್ರ ಎರಡು ವಾರ ಸಮಯ ಕೇಳಿದರು. ಸುಪ್ರೀಂಕೋರ್ಟ್ ಗಟ್ಟಿಯಾಗಿ ಹೇಳಿದ ಬಳಿಕ ನಾವು ಕೇಳಿದ್ದರಲ್ಲಿ 19% ಮಾತ್ರ ಪರಿಹಾರ ಕೊಟ್ಟಿದ್ದಾರೆ. ನಾವು ಬಾಕಿ ಪರಿಹಾರಕ್ಕಾಗಿ ಕಾನೂನು ಹೋರಾಟ ಮುಂದುವರೆಸುತ್ತೇವೆ ಎಂದರು.
ಪೆನ್ ಡ್ರೈವ್ ಪ್ರಕರಣದ ಆರೋಪಕ್ಕೆ ಉತ್ತರ
ಬಿಜೆಪಿಯ ದೇವರಾಜೇಗೌಡ ಅವರೇ ಮೊದಲಿಗೆ ಪತ್ರಿಕಾಗೋಷ್ಠಿ ನಡೆಸಿದ್ದರು. ಅತ್ಯಾಚಾರಕ್ಕೆ ಒಳಗಾದವರು ದೂರು ಕೊಟ್ಟರು. ಆರು ತಿಂಗಳ ಮೊದಲೇ ಬಿಜೆಪಿಗೆ ವಿಷಯ ಗೊತ್ತಿತ್ತು. ಆದರೂ ಬಿಜೆಪಿ ಪ್ರಜ್ವಲ್ ಗೆ NDA ಟಿಕೆಟ್ ನೀಡಿತು. ಮೋದಿ ಬಂದು ಪ್ರಜ್ವಲ್ ಗೆಲ್ಲಿಸಲು ಭಾಷಣ ಮಾಡಿದರು
ನೀವು ಪ್ರಧಾನ ಮಂತ್ರಿ ಆಗ್ತೀರಾ ಪ್ರಶ್ನೆಗೆ ಉತ್ತರಿಸಿ, ದೇಶದಲ್ಲಿ ಗುಜರಾತ್ ಮಾದರಿಯೇ ಇಲ್ಲ. ಅದು ಸುಳ್ಳು ಎನ್ನುವುದು ಸಾಬೀತಾಗಿದೆ. ನಾವು ಐದು ಗ್ಯಾರಂಟಿಗಳನ್ನು ಘೋಷಿಸಿ, ಜಾರಿ ಮಾಡಿದ್ದರಿಂದ ದೇಶದಲ್ಲಿ ಕರ್ನಾಟಕ ಮಾಡೆಲ್ ಜಾರಿಯಲ್ಲಿದೆ. ಕೆಂದ್ರದಲ್ಲಿ INDIA ಮೈತ್ರಿಕೂಟ ಅಧಿಕಾರಕ್ಕೆ ಬರಲಿದ್ದು ನಮ್ಮ ಕಾರ್ಯಕ್ರಮಗಳ ಜಾರಿ ಆಧಾರದಲ್ಲಿ ಚರ್ಚಿಸಿ ಪ್ರಧಾನಮಂತ್ರಿ ಯಾರಾಗಬೇಕು ಎನ್ನುವುದನ್ನು ನಿರ್ಧರಿಸುತ್ತೇವೆ.