ಬೆಂಗಳೂರು, ಮೇ 20(DaijiworldNews/AK):ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ, ಅಂಜಲಿ ಅಂಬಿಗೇರ ಎಂಬ ಯುವತಿಯರ ಕೊಲೆಯಾಗಿದೆ. ಮುಂದಿನ ದಿನಗಳಲ್ಲಿ ಯಾರ ಕೊಲೆ ಆಗುತ್ತದೆ ಎಂಬ ಭಯ ಶುರುವಾಗಿದೆ. ಈಗ ಕಾಲೇಜಿನಲ್ಲಿ, ಮನೆ ಹೊರಗೆ ಹೋದರೆ ಬದುಕಿ ಬರುತ್ತೇವೆ ಎಂಬ ಗ್ಯಾರಂಟಿ ಮಹಿಳೆಯರಲ್ಲಿ ಇಲ್ಲದಂತೆ ಸರ್ಕಾರ ಮಾಡಿದೆ ಎಂದು ವಿಪಕ್ಷ ನಾಯಕ ಆರ್ ಆಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು ಸರ್ಕಾರಕ್ಕೆ ಒಂದು ವರ್ಷ ತುಂಬಿದ ಬಗ್ಗೆ ಮಾತನಾಡಿದ ಅವರು, ಬಸ್, ವಿದ್ಯುತ್ ಫ್ರೀ ಕೊಟ್ಟರೇ ಏನು, ಬದುಕುವ ಅವಕಾಶ ಕಿತ್ತುಕೊಂಡಿದೆ. ಕೊಲೆ ಮಾಡಿದವನಿಗೆ ನೇಣಿಗೆ ಹಾಕಿ ಅಂತ ಅಂಜಲಿ ತಂಗಿ ಹೇಳುತ್ತಾರೆ. ಆದರೆ ಸರ್ಕಾರವನ್ನೇ ನೇಣಿಗೆ ಹಾಕಬೇಕು ಎಂದು ವಾಗ್ದಾಳಿ ನಡೆಸಿದರು.
ಅಂಜಲಿ ಕೊಲೆ ಹಿಂದೆ ಪೊಲೀಸರ ಲೋಪವೂ ಇದೆ ಅಂತ ಗೃಹ ಸಚಿವರು ಹೇಳಿದ್ದಾರೆ. ಪೊಲೀಸರ ಲೋಪ ಇದೆ ಅಂತ ನೀವೇ ಒಪ್ಪಿಕೊಂಡ ಮೇಲೆ ಸರ್ಕಾರ ನಡೆಸಲು ನಿಮಗೆ ಏನು ಯೋಗ್ಯತೆ ಇದೆ?ಗೃಹ ಸಚಿವರೇ ತಮ್ಮ ವೈಫಲ್ಯ ಒಪ್ಪಿಕೊಂಡಿದ್ದಾರೆ. ಕೊಲೆಗಡುಕರಿಗೆ ನಮ್ಮ ರಾಜ್ಯ ಸ್ವರ್ಗವಾಗುತ್ತಿದೆ. ಹಿಂದುಗಳ ಮಾರಣ ಹೋಮವಾಗುತ್ತಿದೆ. ಠಾಣೆಯಲ್ಲೇ ಪೊಲೀಸರ ಮೇಲೆ ಹಲ್ಲೆ ಮಾಡುತ್ತಾರೆ. ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿಸಿದ್ದು ಸರ್ಕಾರದ ಸಾಧನೆ. ಹನುಮಾನ ಚಾಲಿಸಾ ಹೇಳಿದರೆ ಹಲ್ಲೆ ಮಾಡುತ್ತಾರೆ. ಲವ್ ಜಿಹಾದ್ ಪ್ರಕರಣ ಹೆಚ್ಚಾಗಿದೆ ಹಲ್ಲೆ ಮಾಡುವುದು ಕೂಡ ಫ್ರೀ ಭಾಗ್ಯನಾ? ಎಂದು ಪ್ರಶ್ನಿಸಿದರು.
ಆಂಬುಲೆನ್ಸ್ ನೌಕಕರರಿಗೆ, ಸರ್ಕಾರ ಬಸ್ ಚಾಲಕರಿಗೆ ವೇತನ ನೀಡುತ್ತಿಲ್ಲ. ಬಿಬಿಎಂಪಿ ಗುತ್ತಿಗೆದಾರರ ಬಾಕಿ ಬಿಲ್ ನೀಡಿಲ್ಲ. ಸರ್ಕಾರದ ಹಣಕಾಸು ಸ್ಥಿತಿ ವೆಂಟಿಲೇಟರ್ನಲ್ಲಿ ಇದೆ. ಒಂದು ಲಕ್ಷ ಕೋಟಿ ಸಾಲ ದಾಟಿ ಹೋಗಿದೆ. ಎರಡು ಕೋಟಿ ಸಾಲ ಮಾಡುವಂತಹ ಸ್ಥಿತಿ ಬಂದಿದೆ. ಲೂಟಿ ಸರ್ಕಾರ ಜನರಿಗೆ ಶಿಕ್ಷೆ ಕೊಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.