ನವದೆಹಲಿ, ಮೇ07(Daijiworld News/SS): ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಭರವಸೆಯಂತೆ ಒಡಿಶಾ ರಾಜ್ಯದ ಪುನರ್ ನಿರ್ಮಾಣಕ್ಕಾಗಿ 1 ಸಾವಿರ ಕೋಟಿ ರೂಪಾಯಿಯನ್ನು ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿದೆ.
ಹೆಚ್ಚುವರಿ ಹಣದಲ್ಲಿ 341 ಕೋಟಿ ರೂಪಾಯಿಯನ್ನು ಒಡಿಶಾ ರಾಜ್ಯ ವಿಪತ್ತು ನಿರ್ವಹಣಾ ಪಡೆಗೆ ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಮೇ 3ರಂದು ಮೊದಲ ಬಾರಿಗೆ ಸಂಭವಿಸಿದ್ದ ಅಪರೂಪದ ಬೇಸಿಗೆ ಫೋನಿ ಚಂಡಮಾರುತದಲ್ಲಿ 35 ಮಂದಿ ಮೃತಪಟ್ಟಿದ್ದರು. ವಿದ್ಯುತ್, ದೂರಸಂಪರ್ಕ ಹಾಗೂ ಕುಡಿಯುವ ನೀರು ಪೂರೈಕೆ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.
ಫೋನಿ ಚಂಡಮಾರುತ ಪೀಡಿತ ಒಡಿಶಾದ ವಿವಿಧೆಡೆ ಇಂದು ರಾಷ್ಟ್ರೀಯ ವಿಕೋಪ ನಿರ್ವಹಣಾ ಸಮಿತಿ ಸಂಪುಟ ಕಾರ್ಯದರ್ಶಿ ಪಿ. ಕೆ. ಸಿನ್ಹಾ ಭೇಟಿ ನೀಡಿ ಪರಿಹಾರ ಕಾರ್ಯಗಳ ಬಗ್ಗೆ ಪರಾಮರ್ಶೆ ನಡೆಸಿದರು. ಪುರಿ ಮತ್ತು ಭುವನೇಶ್ವರದಲ್ಲಿ ವಿದ್ಯುತ್ ಮತ್ತು ಟೆಲಿಕಮ್ಯೂನಿಕೇಷನ್ ಸೌಕರ್ಯ ಮರು ಸ್ಥಾಪಿಸಬೇಕಾದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ನಿರ್ವಹಿಸಬೇಕಾಗಿದೆ ಎಂದು ಹೇಳಿದರು.
ಚಂಡಮಾರುತ ಪೀಡಿತ ಪ್ರದೇಶಗಳಲ್ಲಿನ ಎಲ್ಲಾ ಎಟಿಎಂಗಳು ಕಾರ್ಯನಿರ್ವಹಿಸುವಂತೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.