ನವದೆಹಲಿ, ಮೇ 20(DaijiworldNews/AA): ಸದ್ಯ ರದ್ದುಗೊಂಡಿರುವ ದೆಹಲಿ ಮದ್ಯದ ಅಬಕಾರಿ ನೀತಿಗೆ ಸಂಬಂಧ ಪಟ್ಟಂತೆ ಅಕ್ರಮ ಹಣ ವರ್ಗಾವಣೆ ಕೇಸ್ ನಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನ ವಿಸ್ತರಿಸುವಂತೆ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯಕ್ಕೆ ಇಡಿ ಸೋಮವಾರ ಅರ್ಜಿ ಸಲ್ಲಿಸಿದೆ.
ಕೇಜ್ರಿವಾಲ್ ಅವರು ಪ್ರಸ್ತುತ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದಾರೆ. ಜೂನ್ 2 ರಂದು ಮತ್ತೆ ಶರಣಾಗಲು ಸೂಚಿಸಲಾಗಿದೆ ಎಂದು ಇಡಿ ನ್ಯಾಯಾಲಯಕ್ಕೆ ತಿಳಿಸಿದೆ. ಕೋರ್ಟ್ ಅರ್ಜಿಯನ್ನು ಜೂನ್ 2 ರಂದು ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಇನ್ನು ಪ್ರಸ್ತುತ ರದ್ದುಗೊಂಡಿರುವ ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಏಜೆನ್ಸಿಯ ಮನಿ ಲಾಂಡರಿಂಗ್ ತನಿಖೆಯಲ್ಲಿ ಮಾರ್ಚ್ 21 ರಂದು ಇಡಿ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿತ್ತು. ಮೇ 10 ರಂದು ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು, ಕೇಜ್ರಿವಾಲ್ ಮುಖ್ಯಮಂತ್ರಿ ಕಚೇರಿ ಮತ್ತು ದೆಹಲಿ ಸಚಿವಾಲಯಕ್ಕೆ ಭೇಟಿ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು. ಚುನಾವಣೆಯ ಕೊನೆಯ ಹಂತದ ಮತ ಚಲಾವಣೆಯ ಬಳಿಕ ಕೇಜ್ರಿವಾಲ್ ಶರಣಾಗಬೇಕು ಎಂದು ನ್ಯಾಯಾಲಯ ಆದೇಶಿಸಿದೆ.