ಬೆಂಗಳೂರು, ಮೇ. 21(DaijiworldNews/AK):ಹೊರಗುತ್ತಿಗೆ ನೇಮಕಾತಿ ವಿಚಾರದಲ್ಲಿ ದಲಿತರಿಗೆ ವಂಚನೆ ಮಾಡುವ ಮೀಸಲಾತಿಯನ್ನು ರಾಜ್ಯದ ಕಾಂಗ್ರೆಸ್ ಸರಕಾರ ಅಂಗೀಕರಿಸಿದೆ ಎಂದು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪರಿಶಿಷ್ಟ ಜಾತಿ, ವರ್ಗಗಳು ಮತ್ತು ಮಹಿಳಾ ಮೀಸಲಾತಿಗೆ ಅನುಗುಣವಾಗಿ ರಾಜ್ಯ ಸರಕಾರವು ಗುತ್ತಿಗೆ ಆಧಾರದಲ್ಲಿ ನೇಮಕಾತಿಯಲ್ಲಿ ಮಾಡುವುದರಲ್ಲೂ ಕೂಡ ಮೀಸಲಾತಿ ನೀಡಿರುವುದಾಗಿ ತಿಳಿಸಿದ್ದು ಸ್ವಾಗತಾರ್ಹ.
2022-23ರಲ್ಲಿ ನಮ್ಮ ಸರಕಾರ ಇದ್ದಾಗ ಬಸವರಾಜ ಬೊಮ್ಮಾಯಿಯವರು ಈ ಕುರಿತು ತೀರ್ಮಾನ ಮಾಡಿದ್ದರು. ಈ ಕುರಿತು ಪರಿಶಿಷ್ಟ ಜಾತಿ, ವರ್ಗದವರು ಬಹುದಿನಗಳ ಕಾಲ ಹೋರಾಟ ಮಾಡಿದ್ದರು. ಮೇಲ್ಮನೆಯಲ್ಲಿ ನಾನು ಈ ಕುರಿತು ಪ್ರಶ್ನಿಸಿದ್ದೆ. ಹೊರಗುತ್ತಿಗೆ ನೀಡುವಾಗ ಪರಿಶಿಷ್ಟ ಜಾತಿ, ವರ್ಗಗಳಿಗೆ ಅನ್ಯಾಯ ಆಗುತ್ತಿದೆ. ಅದರಲ್ಲೂ ಮೀಸಲಾತಿ ಕೊಡಲು ಕೇಳಿದ್ದೆ. ಆಗಲೇ ಸರಕಾರ ಒಪ್ಪಿಗೆ ಕೊಟ್ಟಿತ್ತು ಎಂದು ನೆನಪಿಸಿದರು.
ಕಾಂಗ್ರೆಸ್ ಸರಕಾರ ಬಂದು ಒಂದು ವರ್ಷ ಕಳೆದರೂ, ನಾವು ಒತ್ತಡ ಹೇರಿದ್ದರೂ ಅದನ್ನು ಜಾರಿ ಮಾಡಿರಲಿಲ್ಲ. ಕೊನೆಗೂ ಒಂದು ತೀರ್ಮಾನ ತೆಗೆದುಕೊಂಡಿದ್ದಾರೆ. ತೀರ್ಮಾನ ಮಾಡುವಾಗಲೂ ತಾರತಮ್ಯ ಮಾಡಿದ್ದಾರೆ. ಕಾಂಗ್ರೆಸ್ ನಿರಂತರವಾಗಿ ದಲಿತ ವಿರೋಧಿ ಚಟುವಟಿಕೆ, ಸಂಸ್ಕøತಿಯನ್ನು ಮಾಡುತ್ತ ಬಂದಿದೆ. ಯಾವುದೇ ಇಲಾಖೆಯಲ್ಲಿ 20 ನೇಮಕಾತಿ ನಡೆದರೆ ಮೀಸಲಾತಿ ಇಲ್ಲ; ಅದಕ್ಕಿಂತ ಹೆಚ್ಚು ಬಂದರೆ ಮಾತ್ರ ಮೀಸಲಾತಿ ಎಂದಿದ್ದಾರೆ. ಇದು ದಲಿತರು, ಮಹಿಳೆಯರಿಗೆ ಮಾಡುವ ಮೋಸ ಅಲ್ಲವೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ಈ ಉಪ ನಿಯಮವನ್ನು ಯಾಕೆ ಇಟ್ಟಿದ್ದೀರಿ? ಒಂದು ಕೈಯಲ್ಲಿ ಕೊಟ್ಟಂತೆ ಮಾಡಿ ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುವುದು ಕಾಂಗ್ರೆಸ್ ಸಂಸ್ಕಂತಿ ಎಂದು ಟೀಕಿಸಿದರು.
ಹಿಂದೆ ಗುತ್ತಿಗೆ ಕೊಡುವಾಗಲೂ ದಲಿತರಿಗೆ 25 ಲಕ್ಷ ಇದ್ದರೆ ಕೊಡಬೇಕೆಂದು ನಿಯಮ ಇತ್ತು. ಕಾಂಟ್ರಾಕ್ಟ್ ಬೇರೆಯವರಿಗೆ ಕೊಡಲು 4-5 ಪ್ಯಾಕೇಜ್ಗಳನ್ನು ಸೇರಿಸಿ ಒಂದು ಕೋಟಿ ಮೀರುವಂತೆ ಮಾಡಿ ಗುತ್ತಿಗೆ ಬೇರೆಯವರಿಗೆ ಕೊಡುತ್ತಿದ್ದರು. ದಲಿತರನ್ನು ವಂಚಿಸಲು ಹೀಗೆ ಮಾಡಲಾಗುತ್ತಿತ್ತು ಎಂದು ವಿವರಿಸಿದರು.
ಪ್ರಿಯಾಂಕ್ ಖರ್ಗೆಯವರು ಗುಲ್ಬರ್ಗ ಜಿಲ್ಲಾ ಉಸ್ತುವಾರಿ ಸಚಿವರು. ಅಲ್ಲಿ ಓಲೈಕೆ ರಾಜಕಾರಣ ಯಥೇಚ್ಛವಾಗಿ ನಡೆಯುತ್ತಿದೆ. ಮಾತು ಮಾತಿಗೂ ಎಲ್ಲರಿಗೂ ಸವಾಲೆಸೆಯುವ ಸಚಿವರಿದ್ದು, ಅವರ ಜಿಲ್ಲೆಯಲ್ಲಿ ಏನು ನಡೆಯುತ್ತಿದೆ ಎಂದು ಗೊತ್ತಿಲ್ಲವೇ? ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಲಕ್ಕೂರು ಗ್ರಾಮದಿಂದ 44 ವರ್ಷದ ದಲಿತ ಹುಡುಗ ಆನಂದ ಎಂಬುವರು ಸೆಂಟ್ರಲ್ ಯೂನಿವರ್ಸಿಟಿಗೆ ಪಿಎಚ್ಡಿ ಮಾಡಲು ಹೋಗಿದ್ದರು. ಅವರು ಕೊಲೆಯಾಗಿ ಪೆಟ್ರೋಲ್ ಬಂಕ್ ಬಳಿ ಬಿದ್ದಿದ್ದರು. ಇದನ್ನು ಮುಚ್ಚಿಡಲಾಗುತ್ತಿದೆ. ಸಂಪೂರ್ಣ ಜಿಲ್ಲೆಯನ್ನೇ ನಿಯಂತ್ರಿಸುವ ಸಚಿವರಿಗೆ ಇದರ ಬಗ್ಗೆ ತನಿಖೆ ಮಾಡಬೇಕೆಂದು ಗೊತ್ತಿಲ್ಲವೇ ಎಂದು ಎಂದು ಕೇಳಿದರು.