ನವದೆಹಲಿ ಮೇ 21 (DaijiworldNews/AA): ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಬಣವು ಬಹುಮತ ಪಡೆಯುವಲ್ಲಿ ಯಶಸ್ವಿಯಾದರೆ ನಾವೆಲ್ಲರೂ ಕುಳಿತು, ಚರ್ಚೆ ಮಾಡಿ ಪ್ರಧಾನಿ ಹೆಸರನ್ನು ನಿರ್ಧಾರ ಮಾಡುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಬಣ ಗೆದ್ದರೆ ನಮ್ಮ ಒಕ್ಕೂಟದ ಪಾಲುದಾರರು ಕುಳಿತು ಪ್ರಧಾನಿ ಹೆಸರನ್ನು ನಿರ್ಧರಿಸುತ್ತೇವೆ. ಕಾಂಗ್ರೆಸ್ ಜಾತಿ ಗಣತಿ ನಡೆಸಿ ಜನರ ಒಡವೆ, ಜಮೀನು, ಎಮ್ಮೆಗಳನ್ನು ಕಸಿದುಕೊಳ್ಳುತ್ತದೆ ಎಂದು ಪ್ರಧಾನಿ ಮೋದಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ನಾವು ಇಷ್ಟು ವರ್ಷ ಆಡಳಿತ ನಡೆಸಿದ್ದೇವೆ, ಯಾರೊಬ್ಬರ ಮಂಗಳಸೂತ್ರವನ್ನಾದರೂ ಕಸಿದುಕೊಂಡಿದ್ದೇವೆಯೇ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಈ ಬಾರಿ ಬಿಜೆಪಿ ಸರ್ಕಾರ ರಚಿಸುವುದಿಲ್ಲ ಎಂದು ನರೇಂದ್ರ ಮೋದಿ ಅವರು ಅರ್ಥಮಾಡಿಕೊಂಡಿದ್ದಾರೆ. ಹೀಗಾಗಿಯೇ ಅವರು ಸುಳ್ಳು ಹೇಳುತ್ತಿದ್ದಾರೆ. ನೀವು ಇಂಡಿಯಾ ಒಕ್ಕೂಟಕ್ಕೆ ಭಾರೀ ಬಹುಮತವನ್ನು ನೀಡಬೇಕೆಂದು ನಾವು ಬಯಸುತ್ತೇವೆ. ಈ ಬಾರಿ ದೇಶದಲ್ಲಿ ಶಾಂತಿ, ಸಮೃದ್ಧಿ ಮತ್ತು ಏಕತೆಯನ್ನು ತರಲು ನೀವು ಇಂಡಿಯಾ ಒಕ್ಕೂಟಕ್ಕೆ ಮತ ಹಾಕಬೇಕೆಂದು ಮನವಿ ಮಾಡಿದರು.