ಬೆಂಗಳೂರು, ಮೇ.22 (DaijiworldNews/AA): ಶಾಸಕ ಹರೀಶ್ ಪೂಂಜಾ ಬಂಧನಕ್ಕೆ ಯತ್ನಿಸುತ್ತಿರುವುದು ಖಂಡನೀಯ. ಪೂಂಜಾ ಭಾಷಣ ನೋಡಿದ್ದೇನೆ, ಅವರ ಜತೆ ಚರ್ಚಿಸಿದ್ದೇನೆ. ವಿಷಯ ಮರೆಮಾಚುವ ಕೆಲಸ ಪೊಲೀಸರು ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆರೋಪ ಮಾಡಿದ್ದಾರೆ.
ಶಾಸಕ ಹರೀಶ್ ಪೂಂಜಾ ಬಂಧನ ಸಾಧ್ಯತೆ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಶಾಸಕರು ಉದ್ವೇಗದಲ್ಲಿ ಕೆಲವು ಮಾತುಗಳನ್ನು ಹೇಳಿದ್ದಾರೆ. ಅದು ಸರಿ ಅಲ್ಲ ಎಂದು ಅವರಿಗೂ ಅರಿವಾಗಿದೆ. ಹಾಗಂತ ಪದೇಪದೆ ಬಿಜೆಪಿಗರ ಮೇಲೆ ದಬ್ಬಾಳಿಕೆ ಸಹಿಸಲಾಗದು. ಶಾಸಕರನ್ನು ಬಂಧಿಸುವ ದುಸ್ಸಾಹಸಕ್ಕೆ ಕೈಹಾಕಿದರೆ ಮುಂದಾಗುವುದಕ್ಕೆಲ್ಲ ಸರ್ಕಾರ, ಇಲಾಖೆ ಹೊಣೆಯಾಗಬೇಕಾಗುತ್ತದೆ ಎಂದು ಹೇಳಿದ್ದಾರೆ.
ಕಾನೂನು ಸುವ್ಯವಸ್ಥೆ ಹದಗೆಡಲು ನೀವೇ ಕುಮ್ಮಕ್ಕು ಕೊಡುತ್ತಿದ್ದೀರಿ. ಶಶಿರಾಜ್ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು. ಶಾಸಕರ ಬಂಧನಕ್ಕೆ ಮುಂದಾಗುವುದನ್ನು ಕೈ ಬಿಡಬೇಕು. ಗೃಹ ಸಚಿವರು ಎಸ್ಪಿ ಜತೆ ಮಾತನಾಡಿ ಸೂಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಶಶಿರಾಜ್ ಬಂಧನ ವಿರೋಧಿಸಿ ಬೆಳ್ತಂಗಡಿ ಠಾಣೆಯಲ್ಲಿ ಹರೀಶ್ ಪೂಂಜಾ ಅವರು ಪೊಲೀಸರಿಗೆ ಧಮ್ಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹರೀಶ್ ಪೂಂಜಾರನ್ನು ಬಂಧಿಸಲು ಪೊಲೀಸರು ಬೆಳ್ತಂಗಡಿಯ ನಿವಾಸಕ್ಕೆ ತೆರಳಿದ್ದರು. ಈ ವೇಳೆ ಬಿಜೆಪಿ ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ.