ಕಲಬುರ್ಗಿ, ಮೇ 08 (Daijiworld News/MSP): ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದ ಚಿಂಚೋಳಿ ಕ್ಷೇತ್ರದ ಮಾಜಿ ಶಾಸಕ ಉಮೇಶ್ ಜಾಧವ್ ತನ್ನ ಮಗಳು ಪಿಯುಸಿಯಲ್ಲಿ ಅನುತೀರ್ಣ ಆಗಲು ಕಾಂಗ್ರೆಸ್ ನಾಯಕರು ಸುಖಾಸುಮ್ಮನೆ ಆರೋಪಿಸಿ ನೀಡಿದ ಮಾನಸಿಕ ಹಿಂಸೆಯೇ ಕಾರಣ ಎಂದು ಆರೋಪಿಸಿದ್ದಾರೆ.
ಪ್ರಸ್ತುತ ಲೋಕಸಭಾ ಬಿಜೆಪಿ ಅಭ್ಯರ್ಥಿಯಾಗಿರುವ ಉಮೇಶ್ ಜಾಧವ್ ಚಿಂಚೋಳಿಯಲ್ಲಿ ಮಾತನಾಡಿದ ಅವರು, ನಾನು ದುಡ್ಡಿಗಾಗಿ ಬಿಜೆಪಿಗೆ ಮಾರಾಟವಾಗಿದ್ದೇನೆ ಎಂದು ಕಾಂಗ್ರೆಸ್ ನಾಯಕರು ಮಾಡಿದ ಆರೋಪವೇ ಕಾರಣ ಎಂದಿದ್ದಾರೆ.
ನನ್ನ ಪುತ್ರಿ ಪಿಯುಸಿ ಪರೀಕ್ಷೆ ಬರೆಯಲು ಹೋದಾಗ ಅಲ್ಲಿನ ಶಿಕ್ಷಕರೊಬ್ಬರು, ಇವರ ಅಪ್ಪ ಮಾರಾಟವಾಗಿದ್ದಾನೆ ಎಂದು ಹೇಳಿ ಮಾನಸಿಕ ಹಿಂಸೆ ನೀಡಿದ್ದಾರೆ. ಇದರಿಂದ ನೊಂದುಕೊಂಡ ಮಗಳು ಪರೀಕ್ಷೆ ಬರೆಯದೇ ಅಳುತ್ತಾಲೇ ಮನೆಗೆ ಹಿಂತಿರುಗಿ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೂ ಮುಂದಾಗಿದ್ದಳು. ಇದನ್ನು ಗಮನಿಸಿದ ನನ್ನ ಪತ್ನಿ ಆಕೆಯನ್ನು ಜೀವಂತ ಉಳಿಯುವಂತೆ ನೋಡಿಕೊಂಡಿದ್ದಾಳೆ ಎಂದಿದ್ದಾರೆ.
ಈ ಹಿಂದೆಯೇ ಪ್ರಿಯಾಂಕ್ ಖರ್ಗೆ ಅವರು ನನ್ನನು ಕಾಂಗ್ರೆಸ್ ಪಕ್ಷದಿಂದ ಹೊರಗಟ್ಟಬೇಕು ಎಂದು ತಂತ್ರ ಮಾಡಿಕೊಂಡಿದ್ದರು. ನನ್ನ ಮಗನ ವಿವಾಹದ ಸಂದರ್ಭ ಕೂಡಾ ಪ್ರಿಯಾಂಕ್ ಖರ್ಗೆಯ ಆಪ್ತರು ಮನೆಗೆ ಬಂದು ಗಲಾಟೆ ಎಬ್ಬಿಸಿದ್ದರು. ಇದನ್ನು ಕಂಡು ನಮ್ಮ ಮನೆಯಲ್ಲಿದ್ದ ಬೀಗರು, ಅತಿಥಿಗಳು ಅಂದೇ ಅವರ ಊರಿಗೆ ಹಿಂತಿರುಗಿದ್ದರು ಎಂದು ಆರೋಪಿಸಿದರು.
ನನ್ನ ಪುತ್ರಿ ಈ ಹಿಂದೆ ಪ್ರತಿ ಸಾರಿ ಉನ್ನತ ಶ್ರೇಣಿಯಲ್ಲಿ ಪರೀಕ್ಷೆಯಲ್ಲಿ ಪಾಸು ಆಗುತ್ತಿದ್ದಳು. ಆದರೆ, ಕಾಂಗ್ರೆಸ್ ನಾಯಕರು ನಮಗೆ ಸಾಕಷ್ಟು ಮಾನಸಿಕ ಹಿಂಸೆ ನೀಡಿದ್ದರು. ಇದರಿಂದ ನಮ್ಮ ಕುಟುಂಬ ಸಾಕಷ್ಟು ನೋವನ್ನು ಅನುಭವಿಸಿತ್ತು.
ಚಿಂಚೋಳಿ ಮಾಜಿ ಶಾಸಕ ಡಾ. ಉಮೇಶ್ ಜಾಧವ್ ಬಿಕರಿಯಾಗಿದ್ದಾರೆ. 50 ರಿಂದ 60 ಕೋಟಿ ರೂಪಾಯಿಗೆ ಸೇಲಾಗಿದ್ದಾರೆ ಪಕ್ಷಕ್ಕೆ ಮೋಸ ಮಾಡಿ ಬೆನ್ನಿಗೆ ಚೂರಿ ಇರಿದಿದ್ದಾರೆ. ಇಂಥವರನ್ನು ವಂಚಕ, ಮೋಸಗಾರ, ಹೇಡಿ ಎಂದು ಹೇಳಬೇಕು ಎಂದು ಕೆಪಿಸಿಸಿ ದಿನೇಶ್ ಗುಂಡೂರಾವ್ ಹಾಗೂ ಹಲವು ಕಾಂಗ್ರೆಸ್ ನಾಯಕರು ಪದೇ ಪದೇ ಆರೋಪಿಸುತ್ತಲೇ ಬಂದಿದ್ದಾರೆ. ಎರಡು ಬಾರಿ ಕಾಂಗ್ರೆಸ್ ನಿಂದ ಗೆದ್ದು ಶಾಸಕರಾಗಿದ್ದ ಜಾಧವ್, ಲೋಕಸಭಾ ಚುನಾವಣೆಗೂ ಮುಂಚೆ ಬಿಜೆಪಿಗೆ ಸೇರ್ಪಡೆಯಾಗಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧಿಸಿದ್ದಾರೆ.