ನವದೆಹಲಿ, ಮೇ 24 (DaijiworldNews/ AK): ಪೆನ್ಡ್ರೈವ್ ಪ್ರಕರಣದ ಬಳಿಕ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ವಿದೇಶಾಂಗ ಸಚಿವಾಲಯ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ನಿಮ್ಮ ರಾಜತಾಂತ್ರಿಕ ಪಾಸ್ಪೋರ್ಟ್ ಅನ್ನು ಯಾಕೆ ರದ್ದು ಮಾಡಬಾರದು ಎಂದು ಉತ್ತರ ನೀಡುವಂತೆ ಅದು ಸೂಚಿಸಿದೆ.
ಎಸ್ಐಟಿ ಪತ್ರದ ಬೆನ್ನಲ್ಲೆ ಪಾಸ್ಪೋರ್ಟ್ ರದ್ದು ಪ್ರಕ್ರಿಯೆ ಆರಂಭಿಸಿರುವ ವಿದೇಶಾಂಗ ಸಚಿವಾಲಯ, ನಿಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ. ನ್ಯಾಯಲಯ ಕೂಡಾ ಅರೆಸ್ಟ್ ವಾರೆಂಟ್ ಹೊರಡಿಸಿದೆ. ಪ್ರಕರಣದ ಬೆನ್ನಲ್ಲೆ ರಾಜತಾಂತ್ರಿಕ ಪಾಸ್ಪೋರ್ಟ್ ಬಳಸಿ ನೀವು ವಿದೇಶಕ್ಕೆ ತೆರಳಿದ್ದೀರಿ. ವಿಚಾರಣೆಯಿಂದ ಪಾರಾಗಾಲು ನೀವು ಪಾಸ್ಪೋರ್ಟ್ ದುರುಪಯೋಗಪಡಿಸಿಕೊಂಡು ವಿದೇಶ ಪ್ರಯಾಣ ಮಾಡಿದ್ದು, ನಿಮ್ಮ ಪಾಸ್ಪೋರ್ಟ್ ಅನ್ನು ಯಾಕೆ ರದ್ದು ಮಾಡಬಾರದು ಎಂದು ಕೇಳಿದೆ.
ಈ ಬಗ್ಗೆ ವಿವರವಾದ ಮಾಹಿತಿಯನ್ನು ನಿರ್ದಿಷ್ಟ ಅವಧಿಯಲ್ಲಿ ನೀಡಬೇಕು. ಒಂದು ವೇಳೆ ಮಾಹಿತಿ ತೃಪ್ತಕರ ಎನಿಸದಿದ್ದಲ್ಲಿ ಪಾಸ್ಪೋರ್ಟ್ ರದ್ದು ಮಾಡಲಾಗುವುದು ಎಂದು ವಿದೇಶಾಂಗ ಸಚಿವಾಲಯ ನೋಟಿಸ್ನಲ್ಲಿ ಎಚ್ಚರಿಕೆ ನೀಡಿದೆ. ಹೀಗಾಗಿ ಪ್ರಜ್ವಲ್ ರೇವಣ್ಣ ಈಗ ಉತ್ತರ ನೀಡಲೇಬೇಕಾದ ಅನಿವಾರ್ಯತೆ ಎದುರಾಗಿದೆ.