ನವದೆಹಲಿ, ಮೇ 08 (Daijiworld News/MSP): ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ 'ಚೌಕಿದಾರ್ ಚೋರ್ ಹೈ' ಹೇಳಿಕೆಯನ್ನು ಸುಪ್ರೀಂ ಕೋರ್ಟಿನ ರಫೇಲ್ ತೀರ್ಪಿನಲ್ಲೂ ಬಳಸಿದೆ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್ ನಲ್ಲಿ ಬೇಷರತ್ ಕ್ಷಮೆ ಯಾಚನೆ ಮಾಡಿದ್ದಾರೆ.
ರಫೇಲ್ ಕುರಿತು ನೀಡಿರುವ ತೀರ್ಪುನ್ನು ಪರಿಶೀಲಿಸಬೇಕೆಂಬ ಪ್ರತಿಪಕ್ಷ ಕೋರಿಕೆಗೆ ಪೂರಕ ಎಂಬಂತೆ ಬುಧವಾರ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ 3 ಪುಟಗಳ ಅಫಿದವಿತ್ನಲ್ಲಿ ರಾಹುಲ್ ಗಾಂಧಿ ಮತ್ತೊಮ್ಮೆ ಕ್ಷಮೆ ಯಾಚಿಸಿದ್ದಾರೆ. ರಾಹುಲ್ ಗಾಂಧಿ ಅವರ ವಿರುದ್ದ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಸಲ್ಲಿಸಿದ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಹುಲ್ ಗಾಂಧಿ ಅವರು ಸ್ಪಷ್ಟನೆ ನೀಡಿದ್ದು, 'ಚೌಕಿದಾರ್ ಚೋರ್ ಹೈ ಎಂದು ಸುಪ್ರೀಂ ಕೋರ್ಟ್ ಹೇಳಿದೆ' ಎಂಬ ಹೇಳಿಕೆ ಉದ್ದೇಶ ಪೂರ್ವಕವಲ್ಲದ ಮತ್ತು ಅಜಾಗರೂಕ ಹೇಳಿಕೆಯಾಗಿದೆ. ಹೀಗಾಗಿ ನಾನು ಘನ ನ್ಯಾಯಾಲಯವನ್ನು ಬೇಷರತ್ ಕ್ಷಮೆ ಯಾಚಿಸುತ್ತಿದ್ದೇನೆ ಎಂದು ಕ್ಷಮೆ ಯಾಚಸಿದ್ದಾರೆ.
ರಾಹುಲ್ ಗಾಂಧಿ ಈ ಹಿಂದೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಮೂರು ದೋಷಗಳಿರುವುದನ್ನು ಒಪ್ಪಿಕೊಂಡ ರಾಹುಲ್ ಪರ ವಕೀಲರು ರಾಹುಲ್ ಗಾಂಧಿ ಕ್ಷಮೆಯಾಚಿಸುವುದರೊಂದಿಗೆ ಹೊಸ ಅಫಿಡವಿಟ್ ಸಲ್ಲಿಸುವುದಾಗಿ ಹೇಳಿದ್ದರು. ಈ ಹಿಂದೆ ರಾಹುಲ್ ಗಾಂಧಿ ಸುಪ್ರೀಂಕೋರ್ಟ್ ಗೆ ಚೌಕಿದಾರ್ ಚೋರ್ ಹೈ ಹೇಳಿಕೆ ಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದ್ದರು. ಆದರೆ ವಿಚಾರಣಾ ಪೀಠ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಅರ್ಜಿಯಲ್ಲಿ ಕ್ಷಮೆ ಕೇಳುತ್ತೇನೆ ಎಂಬುದಾಗಿ ಇಲ್ಲ ಕೆಲವೊಂದು ಬಾರಿ ವಿಷಾದ ಅಂತಾರೆ ಇನ್ನೊಂದು ಬಾರಿ ಇಲ್ಲ ಅಂತಾರೆ, ಹೀಗಾಗಿ ಇದಕ್ಕೆ ಸ್ಪಷ್ಟನೆ ನೀಡಿ ರಾಹುಲ್ ಪರ ವಕೀಲರಿಗೆ ನ್ಯಾಯಾಲಯ ತಿಳಿಸಿತ್ತು. ಆ ಬಳಿಕ ರಾಹುಲ್ ಗಾಂಧಿ ಸುಪ್ರೀಂಕೋರ್ಟ್ ನಲ್ಲಿ ತನ್ನಿಂದ ತಪ್ಪಾಗಿರುವುದಾಗಿ ಒಪ್ಪಿಕೊಂಡು ಕ್ಷಮೆಯಾಚಿಸಿ ಹೊಸ ಅಫಿಡೆವಿಟ್ ಸಲ್ಲಿಸುವುದಾಗಿ ತಿಳಿಸಿದ್ದರು.