ಬೆಂಗಳೂರು, ಮೇ 24 (DaijiworldNews/MS): ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಶುಕ್ರವಾರ ಐದನೇ ಆರೋಪಿಯನ್ನು ಬಂಧಿಸಿದೆ.
ಹುಬ್ಬಳ್ಳಿಯ ಶೋಹೆಬ್ ಅಹ್ಮದ್ ಮಿರ್ಜಾ ಯಾನೆ ಛೋಟು(35) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಎಲ್ಇಟಿ ಪಿತೂರಿ ಪ್ರಕರಣದಲ್ಲೂ ಶೋಹೆಬ್ ಅಹ್ಮದ್ ಶಿಕ್ಷೆಗೊಳಗಾಗಿದ್ದ ಎನ್ನಲಾಗಿದೆ . 2018ರಲ್ಲಿ ಜೈಲಿನಿಂದ ಹೊರಬಂದ ಬಳಿಕ ಸ್ಪೋಟ ಪ್ರಕರಣದ ಶಂಕಿತ ಅಬ್ದುಲ್ ಮತೀನ್ ತಾಹಾ ಎಂಬುವನ ಸ್ನೇಹ ಬೆಳೆಸಿದ್ದ. ಅಬ್ದುಲ್ ಮತೀನ್ ನಡುವಿನ ಸಂವಹನಕ್ಕಾಗಿ ತನ್ನ ಇ-ಮೇಲ್ ಐಡಿ ಸಹ ನೀಡಿದ್ದ ಎಂದು ತಿಳಿದುಬಂದಿದೆ.
"ಎನ್ಐಎ ಅಧಿಕಾರಿಗಳು ಮೂರು ದಿನಗಳ ಹಿಂದಷ್ಟೇ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ರಾಜ್ಯಗಳ 11 ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಈಗ ಮತ್ತೊಬ್ಬ ಆರೋಪಿಯನ್ನು ಬಂಧಿಸಿರುವುದಾಗಿ" ಎನ್ಐಎ ಶುಕ್ರವಾರ ತಿಳಿಸಿದೆ.
ಹುಬ್ಬಳ್ಳಿಯಲ್ಲೂ ದಾಳಿ ನಡೆಸಿ ಶೋಹೆಬ್ ಮತ್ತು ಆತನ ಸಹೋದರನನ್ನ ವಶಕ್ಕೆ ಪಡೆಯಲಾಗಿತ್ತು. ಇಬ್ಬರನ್ನು ತೀವ್ರ ವಿಚಾರಣೆ ನಡೆಸಿದ್ದ NIA ಅಧಿಕಾರಿಗಳು ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಹೆಬ್ ಮಿರ್ಜಾನನ್ನು ಬಂಧಿಸಿದ್ದಾರೆ.
ಜೈಲಿನಿಂದ ಹೊರಬಂದ ನಂತರ ಮಿರ್ಜಾ ಈ ಹೊಸ ಸಂಚಿನಲ್ಲಿ ಭಾಗಿಯಾಗಿರುವುದು ಎನ್ಐಎ ತನಿಖೆಯಿಂದ ತಿಳಿದುಬಂದಿದೆ.