ದೆಹಲಿ, ಮೇ.25 (DaijiworldNews/AA): ನಾನು ಸರ್ವಾಧಿಕಾರ, ನಿರುದ್ಯೋಗ ಮತ್ತು ಹಣದುಬ್ಬರದ ವಿರುದ್ಧ ಮತ ಹಾಕಿದ್ದೇನೆ. ನೀವೂ ಹೋಗಿ ಅದರ ವಿರುದ್ಧ ಮತ ಚಲಾಯಿಸಬೇಕು ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್, ಅವರ ಪತ್ನಿ ಹಾಗೂ ಇತರ ಕುಟುಂಬದ ಸದಸ್ಯರೊಂದಿಗೆ ಲೋಕಸಭಾ ಚುನಾವಣೆಯ ಆರನೇ ಹಂತದಲ್ಲಿ ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಡಿದ ಅವರು, ನಾನು ಇಂದು ನನ್ನ ತಂದೆ, ಹೆಂಡತಿ ಮತ್ತು ಮಕ್ಕಳೊಂದಿಗೆ ಮತ ಚಲಾಯಿಸಿದ್ದೇನೆ. ನನ್ನ ತಾಯಿ ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರಿಗೆ ಮತದಾನ ಮಾಡಲು ಹೋಗಲಾಗಲಿಲ್ಲ. ಬೇಸಿಗೆಯ ತೀವ್ರತೆಯ ನಡುವೆಯೂ ಮತಗಟ್ಟೆಗಳಿಗೆ ತೆರಳಿ ನಿರುದ್ಯೋಗ, ಹಣದುಬ್ಬರ ಸೇರಿದಂತೆ ಹಲವು ಸಮಸ್ಯೆಗಳ ವಿರುದ್ಧ ಮತ ಚಲಾಯಿಸುವಂತೆ ಅವರು ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇನ್ನು ಶುಕ್ರವಾರ ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ನನ್ನ ಎಲ್ಲಾ ಮತದಾರ ಸಹೋದರ ಸಹೋದರಿಯರು ಖಂಡಿತವಾಗಿ ಬಂದು ಮತ ಚಲಾಯಿಸುವಂತೆ ನಾನು ಮನವಿ ಮಾಡುತ್ತೇನೆ. ನಿಮ್ಮ ಕುಟುಂಬ, ಸಂಬಂಧಿಕರು ಮತ್ತು ಸ್ನೇಹಿತರಲ್ಲಿಯೂ ಸಹ ಮತ ಚಲಾಯಿಸಲು ಕೇಳಿ. ಪ್ರಜಾಪ್ರಭುತ್ವದ ಈ ಮಹಾನ್ ಹಬ್ಬದಲ್ಲಿ, ನಿಮ್ಮ ಪ್ರತಿಯೊಂದು ಮತವೂ ಸರ್ವಾಧಿಕಾರಿ ಚಿಂತನೆಯ ವಿರುದ್ಧ, ಭಾರತೀಯ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಬಲಪಡಿಸುತ್ತದೆ. ಮತಗಟ್ಟೆಗೆ ಹೋಗಿ ಭಾರತದಲ್ಲಿ ಪ್ರಜಾಪ್ರಭುತ್ವವಿದೆ ಎಂದು ನಿಮ್ಮ ಮತದೊಂದಿಗೆ ತೋರಿಸಿ. ಪ್ರಜಾಪ್ರಭುತ್ವ ಉಳಿಯುತ್ತದೆ ಎಂದು ಬರೆದುಕೊಂಡಿದ್ದರು.