ಭುವನೇಶ್ವರ, ಮೇ 26 (DaijiworldNews/AK):ಒಡಿಶಾದ ಖುರ್ದಾ ಜಿಲ್ಲೆಯಲ್ಲಿ ಇವಿಎಂ ಧ್ವಂಸಗೊಳಿಸಿದ ಆರೋಪದ ಮೇಲೆ ಬಿಜೆಪಿ ಅಭ್ಯರ್ಥಿ,ಶಾಸಕ ಪ್ರಶಾಂತ್ ಜಗದೇವ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಬೇಗನಿಯಾ ವಿಧಾನಸಭಾ ಕ್ಷೇತ್ರದ ಬೋಲಗಾಡ್ ಬ್ಲಾಕ್ನ ಕೌನ್ರಿಪಟ್ನಾದ ಬೂತ್ಗೆ ಮತ ಚಲಾಯಿಸಲು ಪ್ರಶಾಂತ್ ಜಗದೇವ್ ತಮ್ಮ ಪತ್ನಿಯೊಂದಿಗೆ ತೆರಳಿದ್ದರು. ಈ ವೇಳೆ ಇವಿಎಂ ತಾಂತ್ರಿಕ ದೋಷದಿಂದ ಕೆಲ ಸಮಯ ಅವರು ಕಾಯಬೇಕಾಗಿ ಬಂತು. ಇದರಿಂದ ಕೋಪಗೊಂಡ ಅವರು, ಚುನಾವಣಾ ಸಿಬ್ಬಂದಿ ಮೇಲೆ ರೇಗಿದ್ದಾರೆ.ಬಳಿಕ ಇವಿಎಂ ಅನ್ನು ಎಳೆದಾಡಿದ್ದು, ಅದು ಕೆಳಗೆ ಬಿದ್ದು ಒಡೆದು ಹೋಗಿದೆ.
ಈ ಸಂಬಂಧ ಚುನಾವಣಾ ಸಿಬ್ಬಂದಿ ದೂರು ನೀಡಿದ್ದು, ಪ್ರಜಾಪ್ರತಿನಿಧಿ ಕಾಯ್ದೆಯ ಜೊತೆಗೆ ಐಪಿಸಿಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಖುರ್ದಾ ಜೈಲಿನಲ್ಲಿ ಇರಿಸಲಾಗಿದೆ.
ಪ್ರಶಾಂತ್ ಜಗದೇವ್ ಬಂಧನದ ಬೆನ್ನಲ್ಲೇ ಅವರ ವಿರುದ್ಧದ ಆರೋಪಗಳು ರಾಜಕೀಯ ಪ್ರೇರಿತ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.