ಚಿತ್ರದುರ್ಗ, ಮೇ 27 (DaijiworldNews/AA): ಇಷ್ಟು ದಿನ ಶಿಕ್ಷಣ ಕ್ಷೇತ್ರವನ್ನು ಬಿಜೆಪಿ ಹೊಲಸು ಮಾಡಿದೆ. ಶಿಕ್ಷಣ ಕ್ಷೇತ್ರದ ಪಾವಿತ್ರ್ಯತೆ ಕಾಪಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಚಿತ್ರದುರ್ಗದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ತರಲಾಗಿದೆ. ಕೆಲವು ಕಠಿಣ ಅನ್ನಿಸಿದರೂ ಮಕ್ಕಳ ಹಿತದೃಷ್ಟಿಯಿಂದ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ. ಕಳೆದ ವರ್ಷ 43 ಸಾವಿರ ಅತಿಥಿ ಶಿಕ್ಷಕರ ಸೇವೆ ಪಡೆಯಲಾಗಿತ್ತು. ಅನುದಾನಿತ ಶಾಲಾ ಶಿಕ್ಷಕರ ನೇಮಕಾತಿ ಹಲವು ವರ್ಷಗಳಿಂದ ಅತಂತ್ರವಾಗಿದೆ. ಶಿಕ್ಷಣ ಇಲಾಖೆಯಲ್ಲಿಯೂ ಕೆಲ ಕೊರತೆ, ಸಮಸ್ಯೆ ಇದ್ದು, ಹಲವು ವರ್ಷಗಳಿಂದ ಅವೆಲ್ಲಾ ಬಾಕಿ ಉಳಿದಿದೆ. ಆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ನಡೆಯುತ್ತಿದೆ ಎಂದರು.
ಶಿಕ್ಷಣ ಸಚಿವರ ತಲೆಗೂದಲು ಹಾಗೂ ಸಿನಿಮಾ ರಂಗದ ಆಸಕ್ತಿ ಬಗ್ಗೆ ಟೀಕೆ ಮಾಡಿದ್ದ ಬಿವೈ ವಿಜಯೇಂದ್ರ ಅವರಿಗೆ ತಿರುಗೇಟು ನೀಡಿದ ಮಧು ಬಂಗಾರಪ್ಪ ಅವರು, ನನ್ನ ಹೇರ್ ಕಟ್ ಮಾಡುವವರಿಗೆ ಬಿಡುವಾಗಿಲ್ಲ. ನಿಮಗೆ ಬಿಡುವಿದ್ದರೆ ಬಂದು ಹೇಳಿ. ರಾಷ್ಟ್ರೀಯ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿರುವ ವಿಜಯೇಂದ್ರ, ಜವಾಬ್ದಾರಿಯಿಂದ ಮಾತನಾಡಬೇಕು. ಚಿತ್ರರಂಗದ ಕುರಿತು ಅವರು ಆಡಿದ ಮಾತು ಸರಿ ಇಲ್ಲ ಎಂದಿದ್ದಾರೆ. ಇನ್ನು ಬಿ.ಎಸ್.ಯಡಿಯೂರಪ್ಪ ಇನ್ನೂ ಸಿಎಂ ಬಿ.ಎಸ್.ಯಡಿಯೂರಪ್ಪ ಇನ್ನೂ ಸಿಎಂ ಹುದ್ದೆಯಲ್ಲಿದ್ದಾರೆ ಎಂಬ ಭ್ರಮೆ ವಿಜಯೇಂದ್ರ ಅವರಲ್ಲಿದೆ. ಅವರು ಈ ಭ್ರಮೆಯಿಂದ ಹೊರಬರಲಿ ಎಂದು ಕಿಡಿಕಾರಿದ್ದಾರೆ.
ಈವರೆಗೆ ವಿಧಾನಪರಿಷತ್ ಚುನಾವಣೆಯನ್ನು ಕಾಂಗ್ರೆಸ್ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ವಿಧಾನಪರಿಷತ್ ನಲ್ಲಿ ಪಕ್ಷಕ್ಕೆ ಬಹುಮತ ಬರುವ ಅಗತ್ಯವಿದೆ. ರಾಜ್ಯದಲ್ಲಿ ಪಕ್ಷ ಸಂಘಟನೆ ಆಗಿದ್ದು, 6 ಕ್ಷೇತ್ರ ಗೆಲ್ಲುವ ಉದ್ದೇಶದಿಂದ ಪಕ್ಷದ ಕಾರ್ಯಕರ್ತರು, ಮುಖಂಡರು ದುಡಿಯುತ್ತಿದ್ದಾರೆ ಎಂದು ತಿಳಿಸಿದರು.