ದಾವಣಗೆರೆ, ಮೇ 27 (DaijiworldNews/AA): ಚನ್ನಗಿರಿ ಲಾಕಪ್ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಆದೇಶ ಹೊರಡಿಸಿದ್ದಾರೆ.
ಚನ್ನಗಿರಿ ಡಿವೈಎಸ್ಪಿ ಪ್ರಶಾಂತ್ ಮುನ್ನೊಳ್ಳಿ, ಸರ್ಕಲ್ ಇನ್ಸ್ಪೆಕ್ಟರ್ ನಿರಂಜನ. ಬಿ ಹಾಗೂ ಪಿಎಸ್ಐ ಅಕ್ತರ್ ಅವರನ್ನು ಸಸ್ಪೆಂಡ್ ಮಾಡಿದ್ದಾರೆ. ಪ್ರಕರಣ ಸಂಬಂಧ ಕರ್ತವ್ಯ ಲೋಪ ಎಸಗಿದ ಹಿನ್ನೆಲೆ ಈ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಪೂರ್ವ ವಲಯ ಐಜಿಪಿ ಡಾ. ತ್ಯಾಗರಾಜನ್ ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸ್ ವಶದಲ್ಲಿದ್ದ ಆದಿಲ್ ಎಂಬ ಯುವಕ ಮೇ ೨೪ ರಂದು ಮೃತಪಟ್ಟಿದ್ದ. ಇದರಿಂದ ರೊಚ್ಚಿಗೆದ್ದ ಯುವಕನ ಕುಟುಂಬಸ್ಥರು, ಪೊಲೀಸರೇ ಹೊಡೆದು ಯುವಕನನ್ನು ಕೊಂದಿದ್ದಾರೆ ಎಂದು ಆರೋಪ ಮಾಡಿ ಚನ್ನಗಿರಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ವೇಳೆ ಕೆಲ ಕಿಡಿಗೇಡಿಗಳು ಠಾಣೆಗೆ ನುಗ್ಗಿ ಕೈಗೆ ಸಿಕ್ಕ ವಸ್ತುಗಳನ್ನು ಧ್ವಂಸಗೊಳಸಿದ್ದರು. ಜೊತೆಗೆ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿ, ಐದು ಪೊಲೀಸ್ ವಾಹನಗಳನ್ನು ಹಾನಿಗೊಳಿಸಿದ್ದರು. ಇದರಲ್ಲಿ 11 ಪೊಲೀಸರು ಗಾಯಗೊಂಡಿದ್ದರು.