ನವದೆಹಲಿ, ಮೇ08(Daijiworld News/SS): ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಬದುಕು ಭ್ರಷ್ಟಚಾರಿ ನಂಬರ್ 1 ಎಂಬ ಹಣೆಪಟ್ಟಿಯೊಂದಿಗೆ ಅಂತ್ಯವಾಗಿತ್ತು ಎಂದ ಪ್ರಧಾನಿ ನರೇಂದ್ರ ಮೋದಿಯವರ ಆಕ್ಷೇಪಾರ್ಹ ಹೇಳಿಕೆ ಖಂಡಿಸಿ ಯುವಕನೋರ್ವ ಕೇಂದ್ರ ಚುನಾವಣಾ ಆಯೋಗಕ್ಕೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.
ಅಮೇಥಿಯ ಶಾಹಘರ್ ಮೂಲದ ಮನೋಜ್ ಕಶ್ಯಪ್ ಎಂಬ ಯುವಕ ಈ ಪತ್ರ ಬರೆದಿರುವವರು. ಜನರ ಭಾವನೆಗಳಿಗೆ ಘಾಸಿ ಮಾಡುವ ಹೇಳಿಕೆಗಳನ್ನು ಮತ್ತೊಮ್ಮೆ ನೀಡದಂತೆ ಪ್ರಧಾನಿಗೆ ಸೂಚಿಸಿ ಎಂದು ಆಯೋಗಕ್ಕೆ ಯುವಕ ರಕ್ತದಿಂದ ಪತ್ರ ಬರೆದು ಕಳುಹಿಸಿದ್ದಾರೆ.
ಪತ್ರದಲ್ಲಿ ರಾಜೀವ್ ಗಾಂಧಿ ಬಗ್ಗೆ ಪ್ರಧಾನಿ ಮೋದಿ ನೀಡಿದ ಹೇಳಿಕೆ ನನಗೆ ತೀವ್ರ ನೋವುಂಟು ಮಾಡಿದೆ. ದೇಶಕ್ಕೆ ರಾಜೀವ್ ಗಾಂಧಿಯವರ ಕೊಡುಗೆ ಹೆಚ್ಚೇ ಇದೆ. ಮತದಾನ ಮಾಡಲು ಅರ್ಹವಾಗುವ ವಯಸ್ಸು 18ಕ್ಕೆ ಇಳಿಕೆ, ಪಂಚಾಯತ್ ರಾಜ್ ವ್ಯವಸ್ಥೆ ಜಾರಿ, ದೇಶದಲ್ಲಿ ಕಂಪ್ಯೂಟರ್ ಕ್ರಾಂತಿ ಹೀಗೆ ಸಾಧನೆಗಳ ಪಟ್ಟಿ ದೊಡ್ಡದಿದೆ ಎಂದು ಉಲ್ಲೇಖಿಸಿದ್ದಾರೆ.
ರಾಜೀವ್ ಗಾಂಧಿ ದೇಶಕ್ಕಾಗಿ ತಮ್ಮ ಪ್ರಾಣ ಅರ್ಪಿಸಿದ್ದು, ದೇಶಕ್ಕಾಗಿ ಅವರು ಅನೇಕ ಕೊಡುಗೆ ನೀಡಿದ್ದಾರೆ. ಪ್ರಮುಖವಾಗಿ ಮತದಾನದ ವಯಸ್ಸನ್ನು 18 ವರ್ಷಕ್ಕೆ ಇಳಿಸಿದ್ದು, ಕಂಪ್ಯೂಟರ್ ಕ್ರಾಂತಿ, ಪಂಚಾಯತ್ ರಾಜ್ ವ್ಯವಸ್ಥೆಗೆ ಬಲ ತುಂಬಿದ ಶ್ರೇಯಸ್ಸು ರಾಜೀವ್ ಗಾಂಧಿಗೆ ಸಲ್ಲಬೇಕು ಎಂದು ಮನೋಜ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಇಂತಹ ಮಹಾನ್ ನಾಯಕನಿಗೆ ಪ್ರಧಾನಿ ಮೋದಿ ಅವಮಾನಿಸಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗಕ್ಕೆ ರಕ್ತದಲ್ಲಿ ಬರೆದ ಪತ್ರದಲ್ಲಿ ಮನೋಜ್ ಕಶ್ಯಪ್ ಒತ್ತಾಯಿಸಿದ್ದಾರೆ.
ರಾಜೀವ್ ಗಾಂಧಿ ಕುರಿತು ಅವಹೇಳನಕಾರಿಯಾಗಿ ಮಾತನಾಡುವವರು ಅವರನ್ನು ಕೊಂದ ಪಾಪಿಗಳಷ್ಟೇ ದುಷ್ಟರು ಎಂದು ಅಮೇಥಿ ಜನ ಭಾವಿಸುತ್ತಾರೆ ಎಂದೂ ಮನೋಜ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.