ಬೆಂಗಳೂರು, ಮೇ 28(DaijiworldNews/AA): ವಿಧಾನ ಪರಿಷತ್ ಅಭ್ಯರ್ಥಿಗಳ ಆಯ್ಕೆಯ ಕುರಿತಂತೆ ಸಿಎಂ, ಡಿಸಿಎಂ ವಿರುದ್ಧ ಗೃಹಸಚಿವ ಡಾ ಜಿ.ಪರಮೇಶ್ವರ್ ಅವರು ಅಸಮಧಾನ ವ್ಯಕ್ತಪಡಿಸಿದ್ದಾರೆ. ಸಿಎಂ, ಡಿಸಿಎಂಗಳಿಬ್ಬರೇ ತೀರ್ಮಾನ ತೆಗೆದುಕೊಂಡರೆ ಸರಿಯಾಗುವುದಿಲ್ಲ. ಪಕ್ಷದ ಹಿರಿಯರ ಸಲಹೆ, ಅಭಿಪ್ರಾಯಗಳನ್ನು ಪಡೆಯಬೇಕು ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹಿರಿಯರು, ಅನುಭವಿ ನಾಯಕರೊಂದಿಗೆ ಚರ್ಚಿಸುವುದು ಒಳ್ಳೆಯದು. ನಮ್ಮ ಪಕ್ಷದಲ್ಲಿ ಅನೇಕ ವರ್ಷಗಳಿಂದ ದುಡಿದ ನಾಯಕರ ಸಲಹೆ ಪಡೆಯಬೇಕು. ಜಾತಿವಾರು, ಪ್ರಾದೇಶಿಕವಾರು, ಪಕ್ಷಕ್ಕೆ ದುಡಿದವರಿಗೆ ಸ್ಥಾನ ನೀಡಬೇಕು ಎಂದು ತಿಳಿಸಿದರು.
ಇನ್ನು ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಚರ್ಚೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಅಧ್ಯಕ್ಷ ಬದಲಾವಣೆ ಪಕ್ಷದ ತೀರ್ಮಾನವಾಗಿದ್ದು ಹೈಕಮಾಂಡ್ ಎಲ್ಲವನ್ನು ನೋಡಿಕೊಳ್ಳುತ್ತದೆ. ಅದನ್ನು ಶಿವಕುಮಾರ್ ಮಾಡುವುದಿಲ್ಲ. ಅವರೇ ಇರಲಿ ಅಂದ್ರೆ ಅವರೇ ಇರುತ್ತಾರೆ. ಬೇರೆಯವರು ಬರಲಿ ಅಂದರೆ ಬೇರೆಯವರು ಬರುತ್ತಾರೆ ಎಂದರು.