ಕೊಪ್ಪಳ, ಮೇ 28 (DaijiworldNews/MS): ಕೊಪ್ಪಳ ತಾಲೂಕಿನ ಹೊಸ ಲಿಂಗಾಪುರ ಗ್ರಾಮದ ಆಶ್ರಯ ಕಾಲೋನಿಯಲ್ಲಿ ಒಂದೇ ಕುಟುಂಬದ ಮೂವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಹೊಸಲಿಂಗಪುರದಲ್ಲಿ ನಡೆದಿದೆ.
ಬಾಡಿಗೆ ಮನೆಯಲ್ಲಿ ವಾಸವಿದ್ದ ರಾಜೇಶ್ವರಿ (50), ಮಗಳಾದ ವಸಂತ (28), ಮೊಮ್ಮಗ ಸಾಯಿ ಧರ್ಮತೇಜ (5) ಸಾವನ್ನಪ್ಪಿದ್ದಾರೆ. ಅಜ್ಜಿ ಮತ್ತು ಮೊಮ್ಮಗನ ಶವ ಬೆಡ್ರೂಮ್ನಲ್ಲಿ ಪತ್ತೆಯಾಗಿದೆ.
ವಸಂತ ಮೃತದೇಹ ಅಡುಗೆ ಮನೆಯಲ್ಲಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.
ಬಾಗಿಲು ಮುರಿದ ಸ್ಥಿತಿಯಲ್ಲಿದ್ದ ಕಾರಣ ಸುತ್ತಮುತ್ತಲಿನ ಜನ ಗಮನಿಸಿ ಮಂಗಳವಾರ ಬೆಳಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಈ ಬೀದಿಯಲ್ಲಿರುವ ಅಂಗಡಿಗಳ ಮುಂದಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಆರೋಪಿ ಪತ್ತೆಗೆ ಬಲೆಬೀಸಿದ್ದಾರೆ. ಈ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.