ನವದೆಹಲಿ, ಮೇ 28(DaijiworldNews/AA): ಎಎಪಿ ಸಚಿವೆ ಅತಿಶಿಗೆ ದೆಹಲಿ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿದ್ದು, ಜೂನ್ 29 ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚನೆ ನೀಡಿದೆ.
ಆಪ್ ಶಾಸಕರಿಗೆ ಬಿಜೆಪಿ ಲಂಚ ನೀಡಿ ಸೆಳೆಯುವ ಪ್ರಯತ್ನ ಮಾಡುತ್ತಿದೆ ಎಂದು ಅತಿಶಿ ಆರೋಪಿಸಿದ್ದರು. ಈ ಹೇಳಿಕೆಯ ವಿರುದ್ಧ ಬಿಜೆಪಿಯ ಮಾಧ್ಯಮ ಮುಖ್ಯಸ್ಥ ಪ್ರವೀಣ್ ಶಂಕರ್ ಕಪೂರ್ ಅವರು ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ನ್ಯಾಯಾಲಯ ಈ ಆದೇಶ ನೀಡಿದೆ.
ಅತಿಶಿ ಹೇಳಿಕೆಯಿಂದ ಬಿಜೆಪಿ ಪಕ್ಷದ ಪ್ರತಿಷ್ಠೆಗೆ ಹಾನಿಯಾಗಿದೆ ಎಂದು ಪ್ರವೀಣ್ ಶಂಕರ್ ಕಪೂರ್ ದೂರಿದ್ದರು. ಈ ರೋಪಗಳನ್ನು ಪರಿಗಣಿಸಿದ ದೆಹಲಿ ನ್ಯಾಯಾಲಯವು ಅತಿಶಿಯನ್ನು ಆರೋಪಿ ಎಂದು ಕರೆದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚಿಸಿದೆ.
ಪ್ರವೀಣ್ ಶಂಕರ್ ಕಪೂರ್ ಪರ ವಾದ ಮಂಡಿಸಿದ ವಕೀಲರು, ಬಿಜೆಪಿಯು 7 ಮಂದಿ ಎಎಪಿ ಶಾಸಕರನ್ನು ಸಂಪರ್ಕ ಮಾಡಿದೆ. ಅವರಿಗೆ ಪಕ್ಷವನ್ನು ಬದಲಾಯಿಸಲು 25 ಕೋಟಿ ರೂ. ಲಂಚ ನೀಡುತ್ತಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ. ಹೀಗಾಗಿ ಎಎಪಿ ನಾಯಕರು ತಾವು ಮಾಡಿದ ಆರೋಪಗಳನ್ನು ಸಾಬೀತುಪಡಿಸಲು ಹಾಗೂ ಸಾಕ್ಷಿಗಳನ್ನು ನೀಡಲು ವಿಫಲರಾಗಿದ್ದಾರೆ ಎಂದು ಹೇಳಿದ್ದಾರೆ.