ಹೂವಿನಹಡಗಲಿ, ಮೇ08(Daijiworld News/SS): ಜನಾಶೀರ್ವಾದ ಇದ್ದರೆ ನಾನು ಮತ್ತೆ ಮುಖ್ಯಮಂತ್ರಿ ಆಗುವೆ ಎಂದು ರಾಜ್ಯ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಜಕಾರಣದಲ್ಲಿ ಏನೇ ಆಗಬೇಕಾದರೂ ಜನರ ಆಶೀರ್ವಾದ, ಬೆಂಬಲ ಬೇಕೇ ಬೇಕು. ಇಲ್ಲದಿದ್ದರೆ ಬರೀ ಬುರುಡೆದಾಸ ಆಗಬೇಕಾಗುತ್ತದೆ. ಅಧಿಕಾರದಲ್ಲಿ ಕೂಡಿಸುವವರು, ಕೆಳಗೆ ಇಳಿಸುವವರೂ ಜನರೇ ಆಗಿದ್ದಾರೆಎಂದು ಹೇಳಿದರು.
ನಾಡಿನಲ್ಲಿ ಶೋಷಿತ ಸಮುದಾಯಗಳಿಗೆ ಪ್ರತ್ಯೇಕ ಮಠಗಳು ಇಲ್ಲದಂತಹ ಸಂದರ್ಭದಲ್ಲಿ ನಾವು ರಾಜ್ಯ ತಿರುಗಿ ಕಾಗಿನೆಲೆಯಲ್ಲಿ ಕನಕಪೀಠ ಸ್ಥಾಪನೆ ಮಾಡಿದ್ದೇವೆ. ಆದರೆ, ನನ್ನ ಟೀಕೆ ಮಾಡುವ ನಾಯಕರು ಪೀಠಕ್ಕೆ ಯಾವ ಕೊಡುಗೆ ನೀಡಿದ್ದಾರೆ. ನನ್ನನ್ನು ಟೀಕೆ ಮಾಡುವುದನ್ನು ಬಿಟ್ಟು ಆ ಗಿರಾಕಿಗಳಿಗೆ ಬೇರೆನೂ ಗೊತ್ತಿಲ್ಲ ಎಂದು ದೂರಿದರು.
ಇದೇ ವೇಳೆ ಮಾತನಾಡಿದ ಈಶ್ವರಪ್ಪ, ಚುನಾವಣೆಯಲ್ಲಿ ಬಿಜೆಪಿಯಿಂದ ಹಿಂದುಳಿದ ವರ್ಗಕ್ಕೆ ಒಂದು ಸೀಟೂ ಕೊಡಿಸದ ನಾಯಕರು, ಸೋಲುವ ಕ್ಷೇತ್ರಗಳಲ್ಲಿ ಟಿಕೆಟ್ ಕೊಡಿಸಿದ್ದಾರೆ ಎಂದು ನಮ್ಮನ್ನು ಟೀಕಿಸಿದ್ದಾರೆ. ನಾಚಿಕೆಗೆಟ್ಟವರು ಸೋಲುವ ಕ್ಷೇತ್ರಗಳಲ್ಲಾದರೂ ಬಿಜೆಪಿ ಟಿಕೆಟ್ ಕೊಡಿಸಬಹುದಿತ್ತಲ್ಲಾ ಎಂದು ಸವಾಲು ಹಾಕಿದರು.