ಹರ್ಯಾಣ, ಮೇ08(Daijiworld News/SS): ನನ್ನ ಅಮ್ಮನನ್ನು ಕಾಂಗ್ರೆಸ್ ಪಕ್ಷದವರು ನಿಂದಿಸಿದ್ದಾರೆ, ನನ್ನ ಅಪ್ಪ ಯಾರು ಎಂದು ಕೇಳಿದ್ದಾರೆ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಕಾಂಗ್ರೆಸ್ ತಮ್ಮ ಪ್ರೀತಿಯ ನಿಘಂಟುವಿನಿಂದ ಕೆಟ್ಟಪದಗಳನ್ನು ಬಳಸುತ್ತದೆ. ಕಾಂಗ್ರೆಸ್ ನನ್ನನ್ನು ಕೆಟ್ಟ ಪದಗಳಿಂದ ಹಂಗಿಸಿದೆ. ಅವರು ನನ್ನ ಅಮ್ಮನನ್ನೂ ಬಿಡಲಿಲ್ಲ. ಕಾಂಗ್ರೆಸ್ನ ನಾಯಕರೊಬ್ಬರು ನನ್ನನ್ನು ಕೊಳಚೆ ನೀರಿನ ಹುಳು ಎಂದಿದ್ದರು.
ಇನ್ನೊಬ್ಬ ನಾಯಕ ನನ್ನನ್ನು ಹುಚ್ಚು ನಾಯಿ ಅಂದರೆ ಮತ್ತೊಬ್ಬರು ಭಸ್ಮಾಸುರ ಎಂದರು. ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದ ಕಾಂಗ್ರೆಸ್ ನಾಯಕರೊಬ್ಬರು ನನ್ನನ್ನು ಮಂಗ ಎಂದಾಗ ಇನ್ನೊಂದು ಸಚಿವರು ನನ್ನನ್ನು ದಾವೂದ್ ಇಬ್ರಾಹಿಂಗೆ ಹೋಲಿಸಿದರು.
ನನ್ನ ಅಮ್ಮನನ್ನು ಅವರು ನಿಂದಿಸಿದ್ದಾರೆ. ನನ್ನ ಅಪ್ಪ ಯಾರು ಎಂದು ಕೇಳಿದ್ದಾರೆ. ಇದೆಲ್ಲವೂ ನಾನು ಪ್ರಧಾನಿ ಆದ ಮೇಲೆ ಕೇಳಿ ಬಂದದ್ದು. ಕಾಂಗ್ರೆಸ್ನ ಕುಟುಂಬ ರಾಜಕಾರಣವನ್ನು ಪ್ರಶ್ನಿಸಿದ್ದಕ್ಕಾಗಿ ನನಗೆ ಇದೆಲ್ಲಾ ಕೇಳಬೇಕಾಗಿ ಬಂತು ಎಂದು ತಿಳಿಸಿದರು.
ನಾನು ಅವರ ಭ್ರಷ್ಟಾಚಾರವನ್ನು ನಿಲ್ಲಿಸಿ ಕುಟುಂಬ ರಾಜಕಾರಣವನ್ನು ಪ್ರಶ್ನಿಸಿದೆ. ಅವರು ಪ್ರೀತಿಯ ಮುಖವಾಡ ಧರಿಸಿ ನನ್ನನ್ನು ನಿಂದಿಸುತ್ತಿದ್ದಾರೆ. ಕಾಂಗ್ರೆಸ್ ನನ್ನನ್ನು ಹಿಟ್ಲರ್, ದಾವೂದ್ ಇಬ್ರಾಹಿಂ, ಮುಸೋಲಿನಿಗೆ ಮೊದಲಾದವರಿಗೆ ಹೋಲಿಸಿತು ಎಂದು ಹೇಳಿದರು.