ಶಿವಮೊಗ್ಗ, ಮೇ 30 (DaijiworldNews/AK): ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡೆತ್ ನೋಟ್ನಲ್ಲಿ ನಿರ್ದಿಷ್ಟವಾಗಿ ಸಚಿವರ ಹೆಸರು ಬರೆದಿಲ್ಲ. ಹೀಗಾಗಿ ಸಚಿವರ ವಿರುದ್ದ ಕ್ರಮ ಕೈಗೊಳ್ಳಲು ಬರುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಪ್ರಕರಣದಲ್ಲಿ ಅವರ ಹೆಸರು ಇತ್ತು. ಇಲ್ಲಿ ಸಚಿವರ ಹೆಸರಿಲ್ಲ. ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧವೂ ಕ್ರಮ ಆಗುತ್ತದೆ ಎಂದು ಹೇಳಿದ್ದಾರೆ.
ಎಲ್ಲಾ ಸಂಸ್ಥೆಗಳು ಸರ್ಕಾರದ ಅಧೀನದಲ್ಲೇ ಕೆಲಸ ಮಾಡೋದು. ಹೀಗಾಗಿ ತನಿಖಾ ಸಂಸ್ಥೆಗಳನ್ನು ಎಲ್ಲರೂ ನಂಬಬೇಕು. ಸಿಬಿಐ ಮೇಲೂ ಪ್ರಭಾವ ಬೀರಬಹುದು ಅಂತಾ ನಾನು ಹೇಳುತ್ತೇನೆ. ತನಿಖೆ ಸಿಬಿಐಗೆ ವಹಿಸಬೇಕಾ, ಬೇಡವಾ ಅಂತಾ ಸರ್ಕಾರ ನಿರ್ಧರಿಸುತ್ತೆ. ಬಿಜೆಪಿಯವರನ್ನು ಕೇಳಿ ನಾವು ಅಧಿಕಾರ ನಡೆಸಬೇಕಾ ಎಂದು ಪ್ರಶ್ನಿಸಿದರು.
ತನಿಖೆಯಲ್ಲಿ ಆಂಧ್ರಕ್ಕೆ ಹಣ ಹೋಗಿದೆಯಾ ಎಂದು ತಿಳಿಯಲಿದೆ. ತನಿಖೆ ಬಳಿಕ ಸತ್ಯಾಸತ್ಯತೆ ಹೊರಬರಲಿದೆ ಎಂದು ಹೇಳಿದ್ದಾರೆ.ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಹದಿಗೆಟ್ಟಿಲ್ಲ. ಬಿಜೆಪಿ ಮಾಡುತ್ತಿರುವ ಆರೋಪ ಶುದ್ದು ಸುಳ್ಳು. ಯಾವುದೇ ಗೂಂಡಾಗಳನ್ನು ನಾವು ಬಿಡುವುದಿಲ್ಲ. ಈ ಹಿಂದೆ ಧರ್ಮದ ಹೆಸರಿನಲ್ಲಿ ಕೊಲೆ ನಡೆಯುತ್ತಿದ್ದವು. ಆದರೆ ಈ ವರ್ಷ ಯಾವುದೇ ಅಂತಹ ಕೊಲೆ ನಡೆದಿಲ್ಲ ಎಂದರು.
ಪ್ರಜ್ವಲ್ ರೇವಣ್ಣ ಕೇಸ್ ವಿಚಾರವಾಗಿ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಮೇಲೆ ವಾರೆಂಟ್ ಇದೆ. ಕಾನೂನು ಪ್ರಕಾರ ಅರೆಸ್ಟ್ ಮಾಡುತ್ತಾರೆ. ಎಸ್ಐಟಿಯವರು ಕ್ರಮ ಕೈಗೊಳ್ಳುತ್ತಾರೆ. ಟೇಕಾಫ್ ಆಗಿದ್ದರೆ, ಅವರು ವಿಮಾನ ಹತ್ತಿದ್ದರೆ, ವಿಮಾನದಲ್ಲಿ ಇದ್ದರೆ 9 ಗಂಟೆ ಬೇಕಾಗುತ್ತದೆ ಎಂದು ಹೇಳಿದ್ದಾರೆ.