ಇಂಫಾಲ, ಮೇ.31(DaijiworldNews/AA): ರೆಮಲ್ ಚಂಡಮಾರುತದ ಪ್ರಭಾವದಿಂದ ಸುರಿದ ಭಾರೀ ಮಳೆಗೆ ಮಣಿಪುರದಲ್ಲಿ ಪ್ರವಾಹ ಉಂಟಾಗಿದ್ದು, ಇದರಲ್ಲಿ 1,88,143 ಮಂದಿ ಸಂಕಷ್ಟಕ್ಕೀಡಾಗಿದ್ದಾರೆ ಎಂದು ತಿಳಿದುಬಂದಿದೆ.
ಕನಿಷ್ಠ 24,265 ಮನೆಗಳಿಗೆ ಹಾನಿಯಾಗಿದ್ದು, 18,103 ಮಂದಿಯನ್ನು ಸ್ಥಳಾಂತರಿಸಲಾಗಿದೆ. ಸುಮಾರು 56 ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ನೀರಾವರಿ ಮತ್ತು ಪರಿಹಾರ ಹಾಗೂ ವಿಪತ್ತು ನಿರ್ವಹಣಾ ಸಚಿವ ಅವಾಂಗ್ ನ್ಯೂಮ್ಮೆ ಮಾಹಿತಿ ನೀಡಿದ್ದಾರೆ.
ಪ್ರವಾಹದಿಂದಾಗಿ ಸುಮಾರು 401 ಹೆಕ್ಟರ್ಗಳಷ್ಟು ಕೃಷಿ ಭೂಮಿ ಹಾನಿಗೊಳಗಾಗಿದೆ. ಇಂಫಾಲ ಪಶ್ಚಿಮ, ಇಂಫಾಲ ಪೂರ್ವ, ಬಿಷ್ಣುಪುರ, ನೋನಿ, ಚುರ್ಚಂದಾಪುರ, ಸೇನಾಪತಿ ಹಾಗೂ ಕಾಕ್ಚಿಂಗ್ ಜಿಲ್ಲೆಯಲ್ಲಿ ಜನರಿಗೆ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಗಿದೆ.
ಪ್ರವಾಹದಿಂದಾಗಿ ಮೂರು ಮಂದಿ ಮೃತಪಟ್ಟಿದ್ದಾರೆ. 9 ಮಂದಿ ಗಾಯಗೊಂಡಿದ್ದು, ಒಬ್ಬರು ಕಾಣೆಯಾಗಿದ್ದಾರೆ ಎಂದು ಸಚಿವರು ಹೇಳಿದ್ದಾರೆ.