ಬೆಂಗಳೂರು, ಮೇ.31(DaijiworldNews/AK): ನಾಗೇಂದ್ರ ಅಂತಹ ವ್ಯಕ್ತಿಯಲ್ಲ. ಸ್ಥಳೀಯ ರಾಜಕೀಯಕ್ಕಾಗಿ ಹೀಗೆ ಆರೋಪ ಮಾಡುತ್ತಿದ್ದಾರೆ. ತನಿಖೆ ನಡೆದಾಗ ಸತ್ಯಾಂಶ ಹೊರಬರಲಿದೆ. ಬಿಜೆಪಿ ಕೇಳಿದ ತಕ್ಷಣ ರಾಜೀನಾಮೆ ನೀಡಲು ಆಗುವುದಿಲ್ಲ ಎಂದು ಸಚಿವ ನಾಗೇಂದ್ರ ಪರ ಸಂಸದ ಡಿಕೆ ಸುರೇಶ್ ಹೇಳಿಕೆ ನೀಡಿದ್ದಾರೆ.
ವಾಲ್ಮೀಕಿ ನಿಗಮದ ಅಕ್ರಮದ ಪ್ರಕರಣವನ್ನ ಸಿಬಿಐಗೆ ಕೊಡಬೇಕು ಎಂಬ ಬಿಜೆಪಿ ಆಗ್ರಹಕ್ಕೆ ಪ್ರತಿಕ್ರಿಯೆ ನೀಡಿದ ಅವರು, .ಕರ್ನಾಟಕ ಪೊಲೀಸ್ ಸಮರ್ಥವಾಗಿದೆ. ಕರ್ನಾಟಕ ಪೊಲೀಸ್ ಎಲ್ಲಾ ನಿಭಾಯಿಸುತ್ತದೆ. ಸಿಬಿಐ ಕೊಡಿ ಅನ್ನೋದು ಬಿಟ್ಟು ಬಿಜೆಪಿ ಬೇರೆ ಏನು ಇಲ್ಲ ಸಿಬಿಐ ಮುಖ್ಯಸ್ಥರು ನಮ್ಮ ರಾಜ್ಯದವರೇ. ಕೇಂದ್ರದಲ್ಲಿ ಬಿಜೆಪಿ ಇದೆ. ನಮಗೆ ಅನುಕೂಲ ಆಗಲಿದೆ ಎಂದು ಕೇಳ್ತಾರೆ ಅಂತ ಆರೋಪ ಮಾಡಿದರು.
ಈ ಹಿಂದೆ ಕರ್ನಾಟಕದಿಂದ 4-5 ಕೇಸ್ ಸಿಬಿಐಗೆ ಕೊಟ್ಟಿದ್ದೇವೆ. ಅದರಲ್ಲಿ ಏನು ನ್ಯಾಯ ಸಿಗಲಿಲ್ಲ. ನಮ್ಮ ಪೊಲೀಸರು ನೀಡಿದ ವರದಿಯನ್ನೇ ನೀಡಿತ್ತು. ಹೀಗಾಗಿ ಸಿಬಿಐ ಏನು ವಿಶೇಷ ಅಲ್ಲ. ಆದರೆ ಬಿಜೆಪಿ ಅವರು ಎಲ್ಲದ್ದಕ್ಕೂ ರಾಜೀನಾಮೆ ಕೇಳುತ್ತಾರೆ. ಕೇಳಿದ ಕೂಡಲೇ ನೀಡಲು ಆಗುವುದಿಲ್ಲ, ಈಶ್ವರಪ್ಪ ಕೇಸ್ ಬೇರೆ. ಈ ಕೇಸ್ ಬೇರೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಸಿಐಡಿ ತನಿಖೆಗೆ ಆದೇಶ ಮಾಡಿದ್ದಾರೆ. ತಪ್ಪು ಯಾರೇ ಮಾಡಿದರೂ ಕ್ರಮ ಆಗುತ್ತದೆ ಎಂದರು.