ಹಾವೇರಿ,ಜೂ1 (DaijiworldNews/MS):ಉತ್ತರ ಕರ್ನಾಟಕದಲ್ಲಿ ರೈತರು ಬಿತ್ತನೆ ಪ್ರಾರಂಭ ಮಾಡಿದ್ದಾರೆ. ಬಿತ್ತನೆ ಬೀಜ, ಗೊಬ್ಬರದ ಕೊರತೆ ಆಗಿದೆ. ಬೀಜದ ದರ ಹೆಚ್ಚಾಗಿದೆ, ಮಳೆ ಬಿದ್ದರೂ ರೈತರು ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ರಾಜ್ಯ ಸರ್ಕಾರ ಮುಂಗಾರು ಸಿದ್ದತೆಯಲ್ಲಿ ವಿಫಲವಾಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಹಾವೇರಿಯಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬರಗಾಲ ಇದ್ದರೂ ಕೃಷಿ ಇಲಾಖೆಯ ಫಾರ್ಮ್ ಗಳು, ಕೃಷಿ ಹಾಗೂ ತೋಟಗಾರಿಕೆ ವಿವಿಗಳ ಮೂಲಕ ಬೀಜೊತ್ಪಾದನೆಗೆ ಕ್ರಮ ಕೈಗೊಳ್ಳಬೇಕಿತ್ತು. ಉತ್ಪಾದನೆ ಮಾಡದಿದ್ದರೂ ಅಗತ್ಯ ಬಿತ್ತನೆ ಬೀಜಗಳನ್ನು ಆಮದು ಮಾಡಿಕೊಳ್ಳಬಹುದಿತ್ತು, ಆ ಕೆಲಸವನ್ನೂ ಸರ್ಕಾರ ಮಾಡಿಲ್ಲ. ಹೀಗಾಗಿ ಬಿತ್ತನೆ ಬೀಜದ ದರ ಹೆಚ್ಚಾಗಿದೆ. ದರ ಹೆಚ್ಚಾಗಿದೆ ಎಂದು ರೈತರು ಬಿತ್ತನೆ ಮಾಡುವುದನ್ನು ನಿಲ್ಲಿಸಲು ಸಾಧ್ಯವಿಲ್ಲ. ಇದರಿಂದ ಆಹಾರ ಉತ್ಪಾದನೆ ಕುಂಠಿತವಾಗುತ್ತದೆ. ಇವರು ಅನ್ನಭಾಗ್ಯ ಅಂತ ಹೇಳುತ್ತಾರೆ. ಅನ್ನಕ್ಕೆ ಮೊದಲು ಬೇಕಾಗಿರುವುದು ಬಿತ್ತನೆ ಬೀಜ ಎಂದು ಹೇಳಿದರು. ನಾವು ರೈತರಿಗೆ ಬಿತ್ತನೆ ಬೀಜ ಖರೀದಿಸಲು ಭೂಸಿರಿ ಅಂತ ಯೋಜನೆ ಮೂಲಕ ಹತ್ತು ಸಾವಿರ ರೂಪಾಯಿ ಕೊಡುತ್ತಿದ್ದೇವು. ಈ ಸರ್ಕಾರ ಅದನ್ನು ನಿಲ್ಲಿಸಿದೆ. ಈ ಸರ್ಕಾರ ರೈತರಿಗೆ ಏನು ಗ್ಯಾರಂಟಿ ಕೊಟ್ಟಿದೆ, ಬೀಜದ ಗ್ಯಾರಂಟಿ ಇಲ್ಲ. ಗೊಬ್ಬರದ ಗ್ಯಾರೆಂಟಿ ಇಲ್ಲ. ಬೆಳೆದ ಬೆಳೆಗೆ ಬೆಲೆ ಗ್ಯಾರೆಂಟಿ ಇಲ್ಲ. ಮಾರುಕಟ್ಟೆ ಗ್ಯಾರೆಂಟಿ ಇಲ್ಲ. ಹೀಗಾಗಿ ಸರ್ಕಾರ ರೈತರಿಗೆ ಪ್ರತಿ ಹೆಕ್ಟೇರ್ ಗೆ 25 ಸಾವಿರ ಪ್ರೋತ್ಸಾಹ ಧನ ಕೊಡಬೇಕು ಎಂದು ಆಗ್ರಹಿಸಿದರು.
ಡಿಎಪಿ ಅಗತ್ಯವಿದೆ
ರೈತರಿಗೆ ಈಗ ಡಿಎಪಿ ಗೊಬ್ಬರದ ಅಭಾವವಿದೆ. ಬೇಕಾಗಿದ್ದನ್ನು ಬಿಟ್ಟು ಉಳಿದಿದ್ದೆಲ್ಲ ಇದೆ. ಈ ವರ್ಷ ಮಾರ್ಕೆಟಿಂಗ್ ಫೆಡರೇಷನ್ ಗೆ ಒಂದು ನಯಾ ಪೈಸೆ ಕೊಟ್ಟಿಲ್ಲ. ಪ್ರತಿವರ್ಷ ಮಾರ್ಕೆಟಿಂಗ್ ಫೆಡರೇಷನ್ ಗೆ 400 ರಿಂದ 500 ಕೋಟಿ ಕೋಡಲಾಗುತ್ರಿತ್ತು ಸಿಎಂ ಸಿದ್ದರಾಮಯ್ಯ ಕೂಡಲೆ ಮಧ್ಯಪ್ರವೇಶ ಮಾಡಬೇಕು, ಫೆಡರೇಶನ್ ಗೆ ಅನುದಾನ ಕೊಡಬೇಕು ಎಂದು ಆಗ್ರಹಿಸಿದರು.
ಸಚಿವರ ತಲೆದಂಡವಾಗಲಿ
ಇನ್ನು ವಾಲ್ಮೀಕಿ ನಿಗಮದ ಪ್ರಕರಣ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರ ಕಾಲದಲ್ಲಿ ಯಾರ ಡೈರೆಕ್ಷನಲ್ಲಿ ಅವ್ಯವಹಾರ ಆಗಿದೆ ಎನ್ನುವುದು ಮುಖ್ಯ. ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ ಡೆತ್ ನೋಟಲ್ಲಿ ಸಚಿವರ ಹೆಸರು ಹೇಳಿದ್ದಾನೆ. ಈ ಬಗ್ಗೆ ತನಿಖೆ ಆಗಲಿ, ಇದರಲ್ಲಿ ಸಚಿವರ ಪಾತ್ರ ಇಲ್ಲ ಅಂದರೆ ಮತ್ತೆ ಸಚಿವರಾಗಲಿ, ಮೊದಲು ಸಚಿವರ ತಲೆದಂಡವಾಗಬೇಕು ಎಂದು ಹೇಳಿದರು.