ಗ್ಯಾಂಗ್ಟಾಕ್, ಜೂ. 02(DaijiworldNews/AA): ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್ಕೆಎಂ) ಭಾನುವಾರ ಹಿಮಾಲಯ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಬಹುಮತದೊಂದಿಗೆ ಸತತ 2ನೇ ಅವಧಿಗೆ ಅಧಿಕಾರದ ಗದ್ದುಗೆಗೇರಿದೆ.
ಸಿಕ್ಕಿಂ ವಿಧಾನಸಭಾ ಚುನಾವಣೆಯ ಮತ ಎಣಿಕೆ ಭಾನುವಾರ ನಡೆಯಿತು. ಸಿಕ್ಕಿಂನ 32 ಕ್ಷೇತ್ರಗಳ ಪೈಕಿ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ನೇತೃತ್ವದ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್ಕೆಎಂ) 26 ಸ್ಥಾನಗಳನ್ನು ಗಳಿಸುವ ಮೂಲಕ 2ನೇ ಬಾರಿಗೆ ಅಧಿಕಾರಕ್ಕೇರಿದೆ.
ಮತ ಎಣಿಕೆ ಇನ್ನೂ ನಡೆಯುತ್ತಿದೆ. ಸಿಎಂ ತಮಾಂಗ್ ಅವರು ರೆನಾಕ್ ಕ್ಷೇತ್ರದಿಂದ 7,000 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಸೋರೆಂಗ್ ಚಕುಂಗ್ ಕ್ಷೇತ್ರದಲ್ಲೂ ಅವರು ಮುನ್ನಡೆ ಸಾಧಿಸಿದ್ದಾರೆ. 32 ಸ್ಥಾನಗಳ ಪೈಕಿ ಎಸ್ಕೆಎಂ 26ರಲ್ಲಿ ಗೆದ್ದು ಇನ್ನೂ ಐದು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇನ್ನು ಪ್ರತಿಪಕ್ಷ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ ಕೇವಲ ಒಂದು ಸ್ಥಾನವನ್ನು ಗೆದ್ದಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಾಲಿ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರು, ನಾನು ಸಿಕ್ಕಿಂ ಜನರಿಗೆ ಮತ್ತು ನಮ್ಮ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಹೇಳುತ್ತೇನೆ. ನಾವು ಜನರಿಗಾಗಿ ಕೆಲಸ ಮಾಡಿದ್ದೇವೆ. ಅದಕ್ಕಾಗಿಯೇ ನಾವು ಗೆದ್ದಿದ್ದೇವೆ ಎಂದು ತಿಳಿಸಿದ್ದಾರೆ.