ಬೆಂಗಳೂರು, ಜೂ. 03(DaijiworldNews/AA): ರಾಜ್ಯದಲ್ಲಿ ಕಾಂಗ್ರೆಸ್ ಎರಡಂಕಿ ದಾಟಲ್ಲ ಎಂದು ಮತಗಟ್ಟೆ ಸಮೀಕ್ಷೆಗಳು ತಿಳಿಸಿದ ಬೆನ್ನಲ್ಲೇ ಕೈ ಶಾಸಕರಲ್ಲಿ ಆತಂಕ ಮೂಡಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರು ಶಾಸಕರಿಗೆ ಧೈರ್ಯ ತುಂಬಿದ್ದಾರೆ.
ಚುನಾವಣೋತ್ತರ ಸಮೀಕ್ಷಾ ವರದಿ ಪ್ರಕಟವಾದ ಬೆನ್ನಲ್ಲೇ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸಿಎಂ ಸಿದ್ದರಾಮಯ್ಯ ಭಾನುವಾರ ರಾತ್ರಿ ಶಾಸಕಾಂಗ ಸಭೆ ಕರೆದಿದ್ದರು. ಈ ಸಭೆಯಲ್ಲಿ ಚುನಾವಣೋತ್ತರ ಸಮೀಕ್ಷಾ ವರದಿ, ಲೋಕಸಭೆ ಚುನಾವಣೆ ಫಲಿತಾಂಶ, ಎಂಎಲ್ಸಿ ಚುನಾವಣೆ, ಮುಂದಿನ ಆಗುಹೋಗುಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಈ ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದಾರಮಯ್ಯ ಅವರು, ಮತದಾನೋತ್ತರ ಸಮೀಕ್ಷೆ ವರದಿ ನೋಡಿ ಯಾರೂ ಧೃತಿಗೆಡೇಡಿ. ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ಉತ್ತಮವಾಗಿ ಕೆಲಸ ಮಾಡಿದ್ದೇವೆ. ಕ್ಷೇತ್ರಗಳಲ್ಲಿ ಭಿನ್ನಾಭಿಪ್ರಾಯವಿಲ್ಲದೆ ಕೆಲಸ ಮಾಡಿದ್ದೇವೆ. ಚುನಾವಣೆ ಬಗ್ಗೆ ನಾವು ಕೂಡ ವರದಿ ತರಿಸಿಕೊಂಡಿದ್ದೇವೆ. ಏನೇ ಆದರೂ ಕರ್ನಾಟಕದಲ್ಲಿ ನಾವು ಎರಡಂಕಿ ದಾಟುತ್ತೇವೆ. ಗುಪ್ತಚರ ಇಲಾಖೆ ವರದಿ ಪ್ರಕಾರ 14-18 ಸ್ಥಾನಗಳಲ್ಲಿ ಗೆಲ್ಲುವ ಅವಕಾಶವಿದೆ. ಹೀಗಾಗಿ ಯಾರೂ ಕೂಡ ಧೃತಿಗೆಡುವ ಅವಶ್ಯಕತೆಯಿಲ್ಲ ಎಂದು ಕಾಂಗ್ರೆಸ್ ಶಾಸಕರಿಗೆ ಧೈರ್ಯ ಹೇಳಿದ್ದಾರೆ.
ಇನ್ನು ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಎಲ್ಲಾ ಮಾಧ್ಯಮಗಳು ಯಾಕೆ ಕಾಂಗ್ರೆಸ್ ಎರಡಂಕಿ ದಾಟಲ್ಲ ಎಂದು ವರದಿ ನೀಡಿವೆ ಗೊತ್ತಿಲ್ಲ. ಅದೇನೆ ಇರಲಿ ನಾವು ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಇಂಡಿಯಾ ಮೈತ್ರಿಕೂಟಕ್ಕೂ ಗೆಲುವಾಗಲಿದೆ. ಇಂದಿನ ಎಐಸಿಸಿ ಅಧ್ಯಕ್ಷರ ಜೊತೆಗಿನ ಸಭೆಯಲ್ಲೂ ಅದೇ ವಿಶ್ವಾಸ ವ್ಯಕ್ತವಾಗಿದೆ ಎಂದು ಅವರು ತಿಳಿಸಿದ್ದಾರೆ.