ಬೆಂಗಳೂರು, ಜೂ. 03(DaijiworldNews/AK):ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಡಿ ಸಚಿವ ನಾಗೇಂದ್ರರ ರಾಜೀನಾಮೆ ಪಡೆಯುವವರೆಗೆ ಬಿಜೆಪಿ ಹೋರಾಟ ಮುಂದುವರೆಸಲಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ತಿಳಿಸಿದರು.
ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ದಲಿತರ 187 ಕೋಟಿ ಹಣವನ್ನು ನುಂಗಿ ನೀರು ಕುಡಿದಿದೆ ಎಂದು ಆಕ್ಷೇಪಿಸಿದರು.
ಸಿದ್ದರಾಮಯ್ಯನವರು ಸಚಿವರ ರಾಜೀನಾಮೆ ಪಡೆಯದೆ ಭಂಡತನ ಮೆರೆಯುತ್ತಿದ್ದಾರೆ ಎಂದು ಟೀಕಿಸಿದರು.ಮತ್ತೆ ಮೋದಿಯವರು ಪ್ರಧಾನಿ ಆಗಲಿದ್ದು, ಆಮೇಲೆ ತೀರ್ಮಾನ ಮಾಡೋಣ ಎಂದು ಕಾಂಗ್ರೆಸ್ಸಿಗರು ಕಾಯುತ್ತಿದ್ದಾರೆ ಎಂದರು. ಕಳ್ಳ- ಖದೀಮರಾದ ಕಾಂಗ್ರೆಸ್ಸಿಗರು ಒಂದು ದಿನದ ಹೋರಾಟಕ್ಕೆ ಬಗ್ಗುವುದಿಲ್ಲ. ಆದ್ದರಿಂದ ರಾಜ್ಯಪಾಲರ ಭೇಟಿ, ಶಾಸಕರಿಂದ ಗಾಂಧಿ ಪ್ರತಿಮೆ ಎದುರು ಹೋರಾಟ, ಜಿಲ್ಲೆ, ಜಿಲ್ಲೆಗಳಲ್ಲಿ ಹೋರಾಟ ಮಾಡುವ ಕುರಿತು ಚರ್ಚೆ ಮಾಡಿದ್ದೇವೆ ಎಂದು ವಿವರಿಸಿದರು.
ಸಿ.ಟಿ.ರವಿ, ಎನ್.ರವಿಕುಮಾರ್, ಎಂ.ಜಿ.ಮುಳೆ ಅವರ ಆಯ್ಕೆ ಕುರಿತು ಮಾತನಾಡಿ, ಪಕ್ಷಕ್ಕಾಗಿ ದುಡಿದವರಿಗೆ ಆದ್ಯತೆ ಕೊಟ್ಟಿದ್ದಾಗಿ ತಿಳಿಸಿದರು. ವಿಧಾನಪರಿಷತ್ತಿನಲ್ಲಿ ನಮ್ಮ ಧ್ವನಿ ಹೆಚ್ಚಾಗಲು ಇವರನ್ನು ಆಯ್ಕೆ ಮಾಡಿದ್ದಾಗಿ ಹೇಳಿದರು.