ನವದೆಹಲಿ, ಜೂ. 03(DaijiworldNews/AK): ಲೋಕಸಭೆ ಚುನಾವಣೆಯ ಮತ ಎಣಿಕೆ ಮಂಗಳವಾರ (ಜೂನ್ 4) ನಡೆಯಲಿದ್ದು, ಈ ಬಾರಿ ಯಾವ ಪಕ್ಷಕ್ಕೆ ಬಹುಮತ ಸಿಗಲಿದೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.
ಇಂಡಿಯ ಬಣ ಮತ್ತು ಎನ್ಡಿಎ ಒಕ್ಕೂಟದ ಮಧ್ಯೆ ಈ ಬಾರಿ ತೀವ್ರ ಪೈಪೋಟಿ. ಈಗಾಗಲೇ ಎಕ್ಸಿಟ್ ಪೋಲ್ ಸಮೀಕ್ಷೆಗಳು ಎನ್ಡಿಎ ಭಾರೀ ಬಹುಮತದಿಂದ ಅಧಿಕಾರಕ್ಕೇರಲಿದೆ ಎಂದು ಹೇಳಿವೆ.
ಲೋಕಸಭೆ ಚುನಾವಣೆಯ ಮತಗಳ ಎಣಿಕೆ ಮಂಗಳವಾರ ನಡೆಯಲಿದೆ. ಚುನಾವಣಾ ಆಯೋಗದ ಪ್ರಕಾರ, ಎಲ್ಲ 7 ಹಂತಗಳಿಗೆ ಮತದಾನವು ಬೆಳಿಗ್ಗೆ 8ರಿಂದ ಪ್ರಾರಂಭವಾಗಲಿದೆ.
ಎಲ್ಲಾ ಮತ ಎಣಿಕೆ ಕೇಂದ್ರಗಳಲ್ಲಿ ಮೊದಲು ಅಂಚೆ ಮತಗಳ ಎಣಿಕೆ ಪ್ರಾರಂಭವಾಗಲಿದೆ. ಅಂಚೆ ಮತ ಎಣಿಕೆ ಆರಂಭವಾದ ಅರ್ಧ ಗಂಟೆಯ ನಂತರ ವಿದ್ಯುನ್ಮಾನ ಮತಯಂತ್ರಗಳಲ್ಲಿ ದಾಖಲಾದ ಮತಗಳ ಎಣಿಕೆ ಕಾರ್ಯ ಆರಂಭವಾಗಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್ ತಿಳಿಸಿದ್ದಾರೆ.
ಲೋಕಸಭೆಯ ಎಲ್ಲಾ 543 ಸದಸ್ಯರನ್ನು ಆಯ್ಕೆ ಮಾಡಲು 7 ಹಂತಗಳಲ್ಲಿ ಏಪ್ರಿಲ್ 19ರಿಂದ ಜೂನ್ 1ರವರೆಗೆ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಲಾಯಿತು. ಮಂಗಳವಾರ ಮತ ಎಣಿಕೆ ನಡೆಯಲಿದ್ದು, ಸಂಜೆಯ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ.
ಎಣಿಕೆಯ ಫಲಿತಾಂಶಗಳು ECI ವೆಬ್ಸೈಟ್ನಲ್ಲಿ results.eci.gov.in ಮತ್ತು ಮತದಾರರ ಸಹಾಯವಾಣಿ ಅಪ್ಲಿಕೇಶನ್ನಲ್ಲಿ ಲಭ್ಯವಿರುತ್ತವೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಮತದಾರರ ಸಹಾಯವಾಣಿ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಪ್ಲೇ ಸ್ಟೋರ್ನಿಂದ ಡೌನ್ಲೋಡ್ ಮಾಡಬಹುದು.
ಮತದಾರರ ಸಹಾಯವಾಣಿ ಅಪ್ಲಿಕೇಶನ್ನಿಂದ ಕ್ಷೇತ್ರವಾರು ಅಥವಾ ರಾಜ್ಯವಾರು ಫಲಿತಾಂಶಗಳ ಜೊತೆಗೆ ವಿಜೇತ ಅಥವಾ ಮುಂಚೂಣಿಯಲ್ಲಿರುವ ಅಥವಾ ಹಿಂದುಳಿದ ಅಭ್ಯರ್ಥಿಗಳ ವಿವರಗಳನ್ನು ಪಡೆಯಬಹುದು.