ನವದೆಹಲಿ, ಜೂ 04(DaijiworldNews/MS): ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಾಗಿರುವ ನಮ್ಮ ದೇಶದ ಲೋಕಸಭಾ ಚುನಾವಣೆಯು ಅಂತಿಮ ಹಂತ ತಲುಪಿದ್ದು, ಇಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭವಾಗಲಿದೆ.
ಮಧ್ಯಾಹ್ನದ ವೇಳೆಗೆ ಬಹುತೇಕ ಎಲ್ಲ 542 ಕ್ಷೇತ್ರಗಳ ಫಲಿತಾಂಶದ ಸ್ಪಷ್ಟ ಚಿತ್ರಣ ದೊರೆಯಲಿದೆ. ಮತ ಎಣಿಕೆ ಕಾರ್ಯದ ಹಿನ್ನಲೆಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಚುನಾವಣೋತ್ತರ ಸಮೀಕ್ಷೆಗಳು ಎನ್ ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದರೆ, ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟವು 295ಕ್ಕೂ ಹೆಚ್ಚು ಸೀಟುಗಳನ್ನು ಪಡೆದುಕೊಳ್ಳುವುದಾಗಿ ಹೇಳಿಕೊಂಡಿವೆ. ಆದರೆ, ದೇಶದ ಮತದಾರ ಯಾವ ತೀರ್ಪು ನೀಡಿದ್ದಾನೆ ಎನ್ನುವುದಕ್ಕೆ ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ.
ಇನ್ನೊಂದೆಡೆ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿ, ಟಿಕೆಟ್ ಗಿಟ್ಟಿಸಿ, ಕಾರ್ಯಕರ್ತರ ದಂಡು ಕಟ್ಟಿಕೊಂಡು ಚುನಾವಣೆ ಎದುರಿಸಿರುವ ಅಭ್ಯರ್ಥಿಗಳ ಎದೆಯಲ್ಲಿ ಡವ ಡವ ಶುರುವಾಗಿದೆ.ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ಸ್ವೀಕರಿಸಿದ್ದ ಅಭ್ಯರ್ಥಿಗಳು ತಮ್ಮೆಲ್ಲ ಸಾಮರ್ಥ್ಯ ಸುರಿದಿದ್ದಾಗಿದೆ. ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗಳಲ್ಲಿ ಭದ್ರವಾಗಿದೆ. ಇಂಥವರೇ ನಮ್ಮ ಸೇವೆಗೆ ಯೋಗ್ಯರು ಎನ್ನುವುದನ್ನು ಮತದಾರ ಪ್ರಭುಗಳು ನಿರ್ಧರಿಸಿ ಆಗಿದ್ದು, ಮತ ಎಣಿಕೆಯೊಂದೇ ಇನ್ನೇನು ಕ್ಷಣಗಣನೆ ಬಾಕಿಯಾಗಿದ್ದು ಎಲ್ಲರ ಚಿತ್ತ ಚುನಾವಣಾ ಫಲಿತಾಂಶದೆಡೆಗೆ ನೆಟ್ಟಿದೆ.