ಬೆಳಗಾವಿ, ಜೂ. 04(DaijiworldNews/AA): ಕ್ಷೇತ್ರದ ಸೇವೆಗಾಗಿ ಜನತೆ ಬಹುಮತ ನೀಡಿ ಗೆಲ್ಲಿಸುವ ಮೂಲಕ ಆಶೀರ್ವಾದ ನೀಡಿರುವುದು ಸಂತಸ ತಂದಿದೆ. ಬೆಳಗಾವಿ ಗಂಡು ಮೆಟ್ಟಿದ ನಾಡು ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ವಿಜೇತ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹೇಳಿದರು.
ಚುನಾವಣೆಯಲ್ಲಿ ಗೆಲುವಿನ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಯಾವತ್ತಿಗೂ ಬಿಜೆಪಿಯ ಭದ್ರಕೋಟೆ. ಸುರೇಶ್ ಅಂಗಡಿಯವರನ್ನು 4 ಬಾರಿ ಇಲ್ಲಿಂದ ಸಂಸತ್ತಿಗೆ ಕಳಿಸಲಾಗಿತ್ತು ಮತ್ತು ಅವರು ಗತಿಸಿದ ನಂತರ ನಡೆದ ಉಪ ಚುನಾವಣೆಯಲ್ಲಿ ಮಂಗಳಾ ಅಂಗಡಿಯವರನ್ನು ಜನ ಆಯ್ಕೆ ಮಾಡಿದರು. ಬಿಜೆಪಿ ಪಕ್ಷದ ನಾಯಕರ ಮತ್ತು ಕಾರ್ಯಕರ್ತರ ಒಗ್ಗಟಿನ ಶ್ರಮದಿಂದ ಗೆಲುವು ಸಾಧ್ಯವಾಗಿದೆ, ಬಹುಮತ ನೀಡಿದ ಎಲ್ಲ ಮತದಾರರಿಗೂ ಧನ್ಯವಾದಗಳು ಎಂದು ತಿಳಿಸಿದರು.
ನಾನು ಬೆಳಗಾವಿಗೆ ಬಂದಾಗ, ಇಲ್ಲಿನ ಶಾಸಕರು, ಮಾಜಿ ಶಾಸಕರು, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಸದಸ್ಯರು ಮತ್ತು ಕ್ಷೇತ್ರದ ಅನೇಕ ಕಾರ್ಯಕರ್ತರು ತಾನೊಬ್ಬ ಮಾಜಿ ಮುಖ್ಯಮಂತ್ರಿ ಮತ್ತು ತಮ್ಮ ನಾಯಕ ಅಂತ ಗೌರವಿಸಿ ಹಗಲು ರಾತ್ರಿ ತನಗಾಗಿ ಪ್ರಚಾರ ಮಾಡಿದರು. ಅವರ ಸಹಾಯ ಮತ್ತು ಬೆಂಬಲವನ್ನು ತಾನ್ಯಾವತ್ತೂ ಮರೆಯಲಾರೆ, ಅವರ ಪರಿಶ್ರಮದಿಂದ ತಾನು 1.75 ಲಕ್ಷ ಮತಗಳ ಭಾರೀ ಅಂತರದಿಂದ ಗೆಲ್ಲಲು ಸಾಧ್ಯವಾಗಿದೆ. ನನ್ನನ್ನು ಹೊರಗಿನವ ಎಂದು ಟೀಕಿಸುತ್ತಿದ್ದ ಕಾಂಗ್ರೆಸ್ ನಾಯಕರಿಗೆ ಜನರೇ ಭಾರೀ ಬಹುಮತದೊಂದಿಗೆ ಗೆಲ್ಲಿಸುವ ಮೂಲಕ ತಕ್ಕ ಉತ್ತರ ನೀಡಿದ್ದಾರೆ ಎಂದರು.