ದೆಹಲಿ, ಜೂ 04(DaijiworldNews/AK): ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ ನೇತೃತ್ವದ ಎನ್ಡಿಎ ಹೆಚ್ಚಿನ ಸೀಟುಗಳನ್ನು ಗಳಿಸಿ ಸರ್ಕಾರ ರಚನೆಗೆ ಸಿದ್ಧವಾಗುತ್ತಿದೆ. ಈ ಹಿನ್ನಲೆಯಲ್ಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ಕಾರ್ಯಕ್ರಮ ಆಯೋಜಿಸಿದ್ದು ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದು, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಬಿಜೆಪಿ ನಾಯಕರು, ಪಕ್ಷದ ಕಾರ್ಯಕರ್ತರು ಪ್ರಧಾನಿಯನ್ನು ಹೂಮಳೆಗೆರೆದು ಸ್ವಾಗತಿಸಿದ್ದಾರೆ.
ಈ ವೇಳೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ನಡ್ಡಾ, ಎನ್ಡಿಎ ಮೇಲೆ ನಂಬಿಕೆ ಇಟ್ಟ ಮತದಾರರಿಗೆ ಧನ್ಯವಾದ ಅರ್ಪಿಸಿದ್ದಾರೆ. ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಲಿದ್ದಾರೆ. ದೇಶದ ಜನರು ಪ್ರಧಾನಿ ಮೋದಿಯವರೊಂದಿಗೆ ನಿಂತಿದ್ದಾರೆ. ಇನ್ನು ಕೆಲವರು ಸ್ವಾರ್ಥಕ್ಕಾಗಿ ಮಾತ್ರ ಸಮ್ಮಿಶ್ರ ರಚನೆ ಮಾಡುತ್ತಾರೆ. ಅಂಥವರನ್ನು ದೇಶದ ಸಾರ್ವಜನಿಕರು ಶಿಕ್ಷಿಸುತ್ತಾರೆ. ಅವರು 30-40 ಸ್ಥಾನಗಳನ್ನು ಗೆದ್ದ ನಂತರ ಸಂಭ್ರಮಿಸಲು ಪ್ರಾರಂಭಿಸುತ್ತಾರೆ, ದೇಶವು ಮೋದಿಯವರೊಂದಿಗೆ ನಿಂತಿದೆ ಎಂಬುದನ್ನು ಅವರು ಮರೆತುಬಿಡುತ್ತಾರೆ ಎಂದು ಹೇಳಿದ್ದಾರೆ. ಈ ಹಿಂದೆ ಒಂದೇ ಒಂದು ಸೀಟು ಇಲ್ಲದ ಕೇರಳದಲ್ಲಿ ಬಿಜೆಪಿ ತನ್ನ ಖಾತೆಯನ್ನು ತೆರೆದಿದೆ ಎಂದ ನಡ್ಡಾ, ಒಡಿಶಾದಲ್ಲಿ ನಾವು ನಿರ್ಣಾಯಕ ಬಹುಮತದೊಂದಿಗೆ ಬಿಜೆಪಿ ಸರ್ಕಾರವನ್ನು ಪಡೆದಿದ್ದೇವೆ ಎಂದು ನಡ್ಡಾ ಹೇಳಿದ್ದಾರೆ.
ಇಂದು ಶುಭ ಮಂಗಳವಾರ ಎನ್ಡಿಎ ಸರ್ಕಾರ ಮೂರನೇ ಬಾರಿಗೆ ಅಧಿಕಾರಕ್ಕೆ ಮರಳುತ್ತಿದೆ. ಎನ್ಡಿಎ ಮತ್ತು ಬಿಜೆಪಿಯಲ್ಲಿ ನಂಬಿಕೆ ಇಟ್ಟಿರುವ ಜನತೆಗೆ ನಾವು ಆಭಾರಿಯಾಗಿದ್ದೇವೆ. ಇಂದಿನ ಗೆಲುವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಗೆಲುವು, ಇದು 140 ಕೋಟಿ ಜನರ ಗೆಲುವು ಎಂದು ಮೋದಿ ಹೇಳಿದ್ದಾರೆ. ಈ ಬಿಸಿಲಿನಲ್ಲಿ ಕೆಲಸ ಮಾಡಿದ ಪಕ್ಷದ ಕಾರ್ಯಕರ್ತರಿಗೆ ಮೋದಿ ಧನ್ಯವಾದಗಳನ್ನರ್ಪಿಸಿದ್ದಾರೆ. 2019ರಲ್ಲಿ ದೇಶ ನಮಗೆ ಎರಡನೇ ಬಾರಿ ಅವಕಾಶ ನೀಡಿದೆ. 2024 ರಲ್ಲಿ, ಎನ್ಡಿಎಗೆ ಸಿಕ್ಕ ಆಶೀರ್ವಾದದೊಂದಿಗೆ ನಾವು ಹಿಂತಿರುಗಿದ್ದೇವೆ ಎಂದು ಹೇಳಿದರು.