ಬಿಹಾರ, ಜೂ. 07(DaijiworldNews/AK): ರಾಜನ್ಸ್ ಸಿಂಗ್ ಅವರು ಬಿಹಾರದ ಮುಂಗೇರ್ ನಿವಾಸಿ. ರೈತ ಕುಟುಂಬದಿಂದ ಬಂದಿರುವ ರಾಜನ್ಸ್ ಅವರು ಕಷ್ಟಪಟ್ಟು ಓದಿ ಜೀವನದಲ್ಲಿ ಮುಂದೆ ಬಂದಿದ್ದಾರೆ. ಅವರ ಸಾಧನೆಯ ಹಿಂದಿರುವ ಪರಿಶ್ರಮವನ್ನು ತಿಳಿಯೋಣ.
ರಾಜನ್ಸ್ ಚಿಕ್ಕಂದಿನಿಂದಲೂ ಓದಿನಲ್ಲಿ ಚುರುಕಾಗಿದ್ದರು.ಮುಂಗೇರ್ ನ ಸರಸ್ವತಿ ಶಿಶು ಮಂದಿರದಿಂದ ಪ್ರಾಥಮಿಕ ಶಿಕ್ಷಣ ಪಡೆದ ನಂತರ, ಪಾಟ್ನಾದಲ್ಲಿ ಹೆಚ್ಚಿನ ಅಧ್ಯಯನ ಮಾಡಿದರು. ನಂತರ ಹೈದರಾಬಾದ್ ನ ಎನ್ ಐಟಿ ದುರ್ಗಾಪುರದಲ್ಲಿ ಬಿ.ಟೆಕ್ ಪದವಿ ಪಡೆದರು.ಬಿ.ಟೆಕ್ ಪದವಿಯನ್ನು ಪೂರ್ಣಗೊಳಿಸಿದ ನಂತರ ಟಾಟಾ ಗ್ರೂಪ್ ನಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಉದ್ಯೋಗ ಮಾಡುತ್ತಲೇ UPSC ಪರೀಕ್ಷೆಗೂ ತಯಾರಿ ನಡೆಸಿದ್ದರು. ಸತತ ಎರಡು ಬಾರಿ ಪರೀಕ್ಷೆಯಲ್ಲಿ ವಿಫಲವಾದರೂ ಅವರು ಧೈರ್ಯ ಕಳೆದುಕೊಳ್ಳಲಿಲ್ಲ.
ದೆಹಲಿಯಲ್ಲಿಯೇ ಇದ್ದುಕೊಂಡು, ಯಾವುದೇ ಕೋಚಿಂಗ್ ಸಹಾಯವಿಲ್ಲದೆ ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸಿದರು. ಇದರ ಫಲವಾಗಿ ಮೂರನೇ ಪ್ರಯತ್ನದಲ್ಲಿ ಯಶಸ್ಸು ಕಂಡರು. 660ನೇ ರ್ಯಾಂಕ್ ಪಡೆಯುವ ಮೂಲಕ ಐಆರ್ ಟಿಎಸ್ ಅಂದರೆ ರೈಲ್ವೇ ಸೇವೆಯಲ್ಲಿ ಸರ್ಕಾರಿ ನೌಕರಿ ಪಡೆದಿದ್ದಾರೆ.
ಬಿಹಾರದ ಮಾಜಿ ಸಂಸದರಾದ ಆನಂದ್ ಮೋಹನ್ ಅವರ ಪುತ್ರಿ ವಕೀಲರಾದ ಸುರಭಿ ಆನಂದ್ ಸಿಂಗ್ ಅವರನ್ನು ವಿವಾಹವಾಗಿದ್ದಾರೆ. ಆನಂದ್ ಮೋಹನ್ ಮತ್ತು ರಾಜನ್ಸ್ ಸಿಂಗ್ ಅವರ ಕುಟುಂಬಗಳು ಹಲವು ವರ್ಷಗಳಿಂದ ಪರಿಚಿತವಾಗಿವೆ. ಸುರಭಿ ಆನಂದ್ ಸಹೋದರ ಚೇತನ್ ಆನಂದ್ ಮತ್ತು ರಾಜನ್ಸ್ ಸಿಂಗ್ ಬಾಲ್ಯದ ಸ್ನೇಹಿತರು. ಸ್ನೇಹಿತನ ಸೋದರಿಯನ್ನೇ ರಾಜನ್ಸ್ ವರಿಸಿದ್ದಾರೆ.