ಬೆಂಗಳೂರು, ಜೂ. 07(DaijiworldNews/AK): ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ಅವ್ಯವಹಾರ ಹಗರಣವನ್ನು ಮುಚ್ಚಿ ಹಾಕಲು ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಲು ರಾಹುಲ್ ಗಾಂಧಿಯವರು ಬಂದಿದ್ದಾರಾ? ಅಥವಾ ಮುಖ್ಯಮಂತ್ರಿಯವರ ರಾಜೀನಾಮೆ ಪಡೆಯಲು ಸಭೆ ಕರೆದಿದ್ದಾರಾ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ಪ್ರಶ್ನಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರ ಹಣವನ್ನು ಲೂಟಿ ಹೊಡೆದ ಸರಕಾರವಿದು. ನೀವು ಈ ಸರಕಾರದ ರಾಜೀನಾಮೆ ಪಡೆಯಲು ಬಂದಿದ್ದೀರಾ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರನ್ನು ಕೇಳಿದರು.
ನಿಗಮದ ಅಧ್ಯಕ್ಷ ಬಸವನಗೌಡ ದದ್ದಲ್ ರಾಜೀನಾಮೆಯೇ? ಪಕ್ಷದಿಂದ ಉಚ್ಚಾಟಿಸುವಿರಾ? ಅವರನ್ನು ಬಂಧಿಸುವಿರಾ? ಸಾಕ್ಷಿ ನಾಶ ಮಾಡುವ ಬಗ್ಗೆ ಮಹತ್ವದ ಸಭೆ ನಡೆಸಿದ್ದ ಸಚಿವ ಶರಣಪ್ರಕಾಶ್ ಪಾಟೀಲರನ್ನು ಬಂಧಿಸುವಿರಾ? ಅವರ ಉಚ್ಚಾಟನೆ ಮಾಡುವಿರಾ ಎಂದು ಸರಣಿ ಪ್ರಶ್ನೆಗಳನ್ನು ಮುಂದಿಟ್ಟರು.
ಹಗರಣರಡಿ ದೊಡ್ಡ ಜಾಲ ಇದ್ದಂತಿದೆ. ಎಲ್ಲರೂ ಅನುಕೂಲ ಪಡೆದುಕೊಂಡಂತೆ ಕಾಣುತ್ತಿದೆ. ಹಾಗಾಗಿ ಎಲ್ಲ ಸಂದೇಹಗಳಿಗೆ ಉತ್ತರ ಕೊಟ್ಟು ಕ್ರಮ ವಹಿಸಬೇಕಿದೆ. ಕರ್ಮಕಾಂಡ ಮಾಡಿ ಭಂಡತನದಲ್ಲಿ ಏನೂ ಉತ್ತರ ಕೊಡದೆ ನಾಗೇಂದ್ರ ಅವರ ರಾಜೀನಾಮೆಯನ್ನು ಅತ್ಯಂತ ಕಷ್ಟಪಟ್ಟು ಪಡೆದಿದ್ದಾರೆ ಎಂದು ಟೀಕಿಸಿದರು. ಅವರ ಬಂಧನ ಆಗಬೇಕಿತ್ತು. ಬಂಧಿಸುವ ಕಾರ್ಯವನ್ನು ಸಿಬಿಐನವರಿಗೆ ಬಿಡಿ ಎಂದು ವ್ಯಂಗ್ಯವಾಗಿ ತಿಳಿಸಿದರು.
ರಾಜ್ಯದ ಇಡೀ ಕಾಂಗ್ರೆಸ್ ಸರಕಾರವೇ ಭ್ರಷ್ಟಾಚಾರದಲ್ಲಿದೆ. ದಲಿತರ ಹಣ ಬೇರೆ ರಾಜ್ಯಕ್ಕೆ ವರ್ಗಾವಣೆ, ಸಾಕ್ಷಿ ನಾಶಕ್ಕೆ ನಿಮ್ಮಲ್ಲಿ ಏನು ಉತ್ತರ ಇದೆ ಎಂದೂ ಅವರು ಪ್ರಶ್ನೆ ಮಾಡಿದರು. ಮುಖ್ಯಮಂತ್ರಿಗಳಿಗೆ ಕಿಂಚಿತ್ತು ನೈತಿಕತೆ, ಮೌಲ್ಯ ಇದ್ದರೆ, ಏನಾದರೂ ನಿಮ್ಮ ಅನುಭವಕ್ಕೆ ಗೌರವ ಇದ್ದರೆ ಮೊದಲು ರಾಜೀನಾಮೆ ಕೊಡಿ ಎಂದು ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ಒತ್ತಾಯಿಸಿದರು.