ದೆಹಲಿ, ಜೂ. 09(DaijiworldNews/AA): ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನಿತಾ ಮಿಲಿಯಮ್ಸ್ ಹಾಗೂ ಅವರ ಸಹದ್ಯೋಗಿ ಬುಚ್ ವಿಲ್ಮೋರ್ ಬೋಯಿಂಗ್ ಸಂಸ್ಥೆಯ ಸ್ಟಾರ್ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಯಶಸ್ವಿಯಾಗಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಪ್ರವೇಶಿಸಿದ್ದಾರೆ.
ಸಂಭ್ರಮದಿಂದ ನರ್ತಿಸುತ್ತಾ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಪ್ರವೇಶಿಸಿದ ಗಗನಯಾತ್ರಿ ಸುನಿತಾ ಮಿಲಿಯಮ್ಸ್ ಅವರ ವಿಡಿಯೋ ತುಣುಕೊಂದನ್ನು ನಾಸಾ ಸಂಸ್ಥೆ ತನ್ನ ಅಧೀಕೃತ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ಸುನೀತಾ ವಿಲಿಯಮ್ಸ್ ಮತ್ತು ಅವರ ಸಹದ್ಯೋಗಿಗಳು ಯಶಸ್ವಿಯಾಗಿ ಬಾಹ್ಯಾಕಾಶ ತಲುಪಿದ್ದಕ್ಕೆ ಸಂಭ್ರಮಿಸುತ್ತಿರುವುದನ್ನು ಕಾಣಬಹುದು.
ವಿಶ್ವವಿಖ್ಯಾತ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರು ಮೂರನೇ ಬಾರಿಗೆ ಯಶಸ್ವಿ ಬಾಹ್ಯಾಕಾಶ ಯಾನ ಕೈಗೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ನಾಸಾದ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರು 2024 ರ ಮೇ 07ರಂದು ಸಂಚರಿಸಿದ್ದ ಬೋಯಿಂಗ್ ಸಂಸ್ಥೆಯ ಸ್ಟಾರ್ಲೈನರ್ ಬಾಹ್ಯಾಕಾಶ ನೌಕೆಯು ಜೂನ್.06ರಂದು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದೆ.
ಬಾಹ್ಯಾಕಾಶ ನಿಲ್ದಾಣವನ್ನು ಯಶಸ್ವಿಯಾಗಿ ತಲುಪಿದ ಕುರಿತ ವಿಡಿಯೋ ಇದೀಗ ವೈರಲ್ ಆಗಿದೆ. ಈ ವಿಡಿಯೋವನ್ನು 2 ದಿನಗಳ ಹಿಂದೆ ಹಂಚಿಕೊಳ್ಳಲಾಗಿದ್ದು, 4.8 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಸಾಕಷ್ಟು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಯಶಸ್ವಿಯಾಗಿ ಬಾಹ್ಯಾಕಾಶ ನಿಲ್ದಾಣ ಪ್ರವೇಶಿಸಿದ ಗಗನಯಾತ್ರಿಗಳಿಗೆ ನೆಟ್ಟಿಗರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.