ಶ್ರೀನಗರ, ಜೂ. 10(DaijiworldNews/AA): ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ನ ಮೇಲೆ ನಡೆದ ಭಯೋತ್ಪಾದಕ ದಾಳಿಯ ಹೊಣೆಯನ್ನು ಇದೀಗ ಪಾಕ್ ಬೆಂಬಲಿತ ಉಗ್ರ ಸಂಘಟನೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ ಹೊತ್ತುಕೊಂಡಿದೆ.
ಉಗ್ರ ಸಂಘಟನೆ ದಾಳಿ ಬಗ್ಗೆ ಸಂದೇಶವನ್ನು ರವಾನೆ ಮಾಡಿದ್ದು, ಇದು ಆರಂಭ, ಪ್ರವಾಸಿಗರು ಮತ್ತು ಸ್ಥಳೀಯರಲ್ಲದವರ ಮೇಲೆ ಹೆಚ್ಚಿನ ದಾಳಿ ನಡೆಸಲಾಗುವುದು ಎಂಬ ಎಚ್ಚರಿಕೆಯನ್ನು ಈ ಸಂದೇಶದಲ್ಲಿ ನೀಡಲಾಗಿದೆ.
ಇನ್ನು ಬಸ್ಸಿನ ಮೇಲೆ ದಾಳಿ ನಡೆಸಿದ ಭಯೋತ್ಪಾದಕರ ಪತ್ತೆಗೆ ಭಾರತೀಯ ಸೇನೆ ಶೋಧ ಕಾರ್ಯಾಚರಣೆ ಆರಂಭಿಸಿದೆ. ಈ ಪ್ರದೇಶದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ದಾಳಿಯ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಗೆ ನೀಡಲಾಗಿದೆ ಎಂದು ಗೃಹ ಸಚಿವಾಲಯದ ಮೂಲಗಳಿಂದ ತಿಳಿದುಬಂದಿದೆ.
ನಿನ್ನೆ ಮಾತಾ ವೈಷ್ಣೋ ದೇವಿ ದೇಗುಲದ ಕತ್ರಾ ಮಾರ್ಗವಾಗಿ ಶಿವ ಖೋರಿ ದೇಗುಲದಿಂದ ಯಾತ್ರಾರ್ಥಿಗಳು ಬಸ್ನಲ್ಲಿ ಹಿಂತಿರುಗುತ್ತಿದ್ದ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಏಕಾಏಕಿ ದಾಳಿ ನಡೆಸಿದ ಪರಿಣಾಮ ಬಸ್ಸಿನ ಚಾಲಕನಿಗೆ ಬುಲೆಟ್ ತಗುಲಿ ವಾಹನ ಕಂದಕಕ್ಕೆ ಉರುಳಿತ್ತು. ಬಸ್ ಕಂದಕಕ್ಕೆ ಉರುಳಿದ ಮೇಲೆಯೂ ಬಸ್ಸಿನ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಈ ದಾಳಿಯಲ್ಲಿ 9 ಮಂದಿ ಸಾವನ್ನಪ್ಪಿ, 33 ಮಂದಿ ಗಾಯಗೊಂಡಿದ್ದರು.