ಬೆಂಗಳೂರು, ಜೂ. 10(DaijiworldNews/AA): ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಕೋಟ್ಯಾಂತರ ರೂ. ಹಗರಣದ ಹಿಂದೆ ಕೇವಲ ಬಿ.ನಾಗೇಂದ್ರ ಇಲ್ಲ. ಈ ಹಗರಣದ ಹಿಂದೆ ದೊಡ್ಡ ನಾಯಕರೇ ಇದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮದಲ್ಲಿ ನಡೆದ ಹಗರಣವು ಸಿಎಂ ಸಿದ್ದರಾಮಯ್ಯ ಅವರಿಗೆ ಗೊತ್ತಿದ್ದೇ ನಡೆದಿದೆ. ಇದರೊಂದಿಗೆ ಇನ್ನಷ್ಟು ಸಚಿವರೂ ಸೇರಿದ್ದಾರೆ. ಹೀಗಾಗಿ ಸಿಎಂ ಕೂಡ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸಿದ್ದರಾಮಯ್ಯನವರಿಗೆ ಆರ್ಥಿಕತೆಯ ಬಗ್ಗೆ ಗೊತ್ತಿದೆಯೇ? ಇಲಾಖೆಯ ಮೇಲೆ ಇವರಿಗೆ ಹಿಡಿತವಿಲ್ಲವೇ? ಈ ಹಣ ಹೈದರಾಬಾದ್ಗೆ ಹೋಗಿದ್ದು ತಿಳಿದರೂ ಬೇರೆಯವರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿಲ್ಲ. ದಲಿತರ ಹಣವನ್ನು ತಿರುಗಿ ನೀಡದಿದ್ದರೆ ಜನರ ಶಾಪ ತಟ್ಟುತ್ತದೆ. ಈ ಅಕ್ರಮದಲ್ಲಿ ಸಿಎಂ ಸಿದ್ದರಾಮಯ್ಯನವರೇ ಮೊದಲ ಆರೋಪಿಯಾಗಿದ್ದು, ಬಿಜೆಪಿಯ ಹೋರಾಟ ಮುಂದುವರಿಯಲಿದೆ ಎಂದರು..
ಇನ್ನು ಲೋಕಸಭೆ ಚುನಾವಣೆಯಲ್ಲಿ ಗ್ಯಾರಂಟಿಗಳಿಂದ ಕಾಂಗ್ರೆಸ್ಗೆ ಮತ ಬಂದಿಲ್ಲ. ಸರ್ಕಾರ ಪಾಪರ್ ಆಗಿ ಅಭಿವೃದ್ಧಿ ಶೂನ್ಯವಾಗಿರುವುದರಿಂದಲೇ ಕಾಂಗ್ರೆಸ್ ಸೋತಿದೆ. ಸರ್ಕಾರ ಮತಕ್ಕಾಗಿ ಗ್ಯಾರಂಟಿ ಜಾರಿ ಮಾಡಿದ್ದರಿಂದ ಈಗ ಸಾಲ ಮಾಡಿ ಸಂಬಳ ನೀಡುವ ಸ್ಥಿತಿ ಉಂಟಾಗಿದೆಎ. ಗ್ಯಾರಂಟಿಗಳಿಂದ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ. ಶಾಸಕರು ಅನುದಾನ ಯಾವಾಗ ಕೊಡುತ್ತೀರಿ ಎಂದು ಪ್ರಶ್ನಿಸುತ್ತಿದ್ದಾರೆ. ಪಾಪರ್ ಆಗಿರುವ ಸರ್ಕಾರ ಎಲ್ಲಾ ಕಡೆ ಬಿಲ್ ಪಾವತಿ ಬಾಕಿ ಇರಿಸಿಕೊಂಡಿದೆ ಎಂದು ತಿಳಿಸಿದರು.