ರಾಮನಗರ, ಜೂ. 11(DaijiworldNews/AA): ಮಂಡ್ಯದಲ್ಲಿ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ರಾಜೀನಾಮೆ ನೀಡುತ್ತಾರೆ. ಚನ್ನಪಟ್ಟಣ ಕ್ಷೇತ್ರವನ್ನು ಕುಮಾರಸ್ವಾಮಿ ಉಳಿಸಿಕೊಳ್ಳುತ್ತಾರೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ತಿಳಿಸಿದ್ದಾರೆ.
ಚನ್ನಪಟ್ಟಣ ಶಾಸಕರಾಗಿದ್ದ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರು ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಗೆದ್ದು ನರೇಂದ್ರ ಮೋದಿ ಸಂಪುಟದಲ್ಲಿ ಕೇಂದ್ರ ಸಚಿವರಾಗಿ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಅವರು ಚನ್ನಪಟ್ಟಣ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿದೆ. ಇನ್ನು ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಸುರೇಶ್ ಅವರು, ಮಂಡ್ಯದಲ್ಲಿ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ರಾಜೀನಾಮೆ ನೀಡುತ್ತಾರೆ. ಚನ್ನಪಟ್ಟಣ ಕ್ಷೇತ್ರವನ್ನ ಕುಮಾರಸ್ವಾಮಿ ಉಳಿಸಿಕೊಳ್ಳುತ್ತಾರೆ. ಚನ್ನಪಟ್ಟಣಕ್ಕೆ ಇನ್ನೂ ಬೈ ಎಲೆಕ್ಷನ್ ಘೋಷಣೆ ಆಗಿಲ್ಲ. ಯಾಕಂದ್ರೆ ಹಾಲಿ ಶಾಸಕರು ಇನ್ನೂ ರಾಜೀನಾಮೆ ನೀಡಿಲ್ಲ ಎಂದರು.
ನಮಗೆ ವಿಶ್ವಾಸ ಇದೆ ಕುಮಾರಸ್ವಾಮಿ ಅವರು ಯಾವುದೇ ಕಾರಣಕ್ಕೂ ಚನ್ನಪಟ್ಟಣ ಕ್ಷೇತ್ರವನ್ನು ಬಿಟ್ಟು ಹೋಗಲ್ಲ. ಅವರಿಗೆ ಅಧಿಕಾರಕ್ಕಿಂತ ಕ್ಷೇತ್ರದ ಜನ, ಕಾರ್ಯಕರ್ತರು ಮುಖ್ಯ. ನಾನು ಸಾಕಷ್ಟು ಬಾರಿ ಅವರ ಮಾತುಗಳನ್ನ ಆಲಿಸಿದ್ದೇನೆ. ಚನ್ನಪಟ್ಟಣ, ರಾಮನಗರ ನನ್ನ ಎರಡು ಕಣ್ಣುಗಳು ಎಂದು ಹೇಳಿದ್ದರು. ಅಧಿಕಾರ ಇದ್ದಾಗ, ಇಲ್ಲದಿದ್ದಾಗ ಅವರ ಮಾತುಗಳನ್ನ ನೋಡಿದ್ದೇನೆ. ಅಲ್ಲದೇ ಅವರು ಹೃದಯವಂತರು ಕೂಡ. ಹಾಗಾಗಿ ಚನ್ನಪಟ್ಟಣ ಉಳಿಸಿಕೊಳ್ತಾರೆ ಅನ್ನೋ ವಿಶ್ವಾಸವಿದೆ ಎಂದು ಹೇಳಿದರು.