ಮಧ್ಯ ಪ್ರದೇಶ, ಜೂ. 12(DaijiworldNews/AA): ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್ ಸಿಯಲ್ಲಿ ತೇರ್ಗಡೆಗೊಳ್ಳುವುದು ಸುಲಭದ ಮಾತಲ್ಲ. ಅದರಲ್ಲೂ ತರಬೇತಿ ಪಡೆಯದೇ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಕಷ್ಟಸಾಧ್ಯ. ಹೀಗೆ ತರಬೇತಿ ಪಡೆಯದೆ ಯುಪಿಎಸ್ ಸಿ ಭೇದಿಸಿ ಐಎಎಸ್ ಅಧಿಕಾರಿಯಾದ ಸೃಷ್ಟಿ ಜಯಂತ್ ದೇಶ್ ಮುಖ್ ಅವರ ಸ್ಪೂರ್ತಿದಾಯಕ ಕಥೆ ಇದು.
ಮಧ್ಯಪ್ರದೇಶದ ಭೋಪಾಲ್ನ ಕಸ್ತೂರ್ಬಾ ನಗರದಲ್ಲಿ 1995 ರಲ್ಲಿ ಸೃಷ್ಟಿ ದೇಶ್ ಮುಖ್ ಜನಿಸುತ್ತಾರೆ. ಸೃಷ್ಟಿ ದೇಶಮುಖ್ ಅವರ ತಂದೆ ಜಯಂತ್ ದೇಶಮುಖ್ ಅವರು ಇಂಜಿನಿಯರ್ ಆಗಿದ್ದರೆ, ಅವರ ತಾಯಿ ಸುನಿತಾ ದೇಶ್ ಮುಖ್ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದವರು.
ಅತ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದ ಸೃಷ್ಟಿ ದೇಶ್ ಮುಖ್ ಅವರು ಭೋಪಾಲ್ ನ ಬಿಹೆಚ್ ಇಲ್ ಕಾರ್ಮೆಲ್ ಕಾನ್ವೆಂಟ್ ಸ್ಕೂಲ್ ನಲ್ಲಿ ಅಧ್ಯಯನ ಮಾಡಿದಳು. ಅವರು 12 ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ 93.4% ಅಂಕಗಳೊಂದಿಗೆ ಉತ್ತೀರ್ಣಳಾದಳು.
ನಂತರ ಸೃಷ್ಟಿ ದೇಶ್ ಮುಖ್ ಅವರು ಭೋಪಾಲ್ನ ರಾಜೀವ್ ಗಾಂಧಿ ಪ್ರೌದ್ಯೋಗಿಕಿ ವಿಶ್ವವಿದ್ಯಾಲಯದಲ್ಲಿ ಕೆಮಿಕಲ್ ಇಂಜಿನಿಯರಿಂಗ್ನಲ್ಲಿ ಪದವಿ ಪಡೆಯುತ್ತಾರೆ. ಬಳಿಕ ಯುಪಿಎಸ್ ಸಿ ಪರೀಕ್ಷೆಯನ್ನು ಯಾವುದೇ ತರಬೇತಿ ಪಡೆಯದೇ ಸ್ವಯಂ ಅಧ್ಯಯನದ ಮೂಲಕ ಬರೆಯುತ್ತಾರೆ. 2018 ರಲ್ಲಿ ಯುಪಿಎಸ್ ಸಿ ಪರೀಕ್ಷೆ ಬರೆದ ಸೃಷ್ಟಿ ದೇಶ್ ಮುಖ್ ಅವರು ಐದನೇ ರ್ಯಾಂಕ್ ಗಳಿಸುವ ಮೂಲಕ ಉತ್ತೀರ್ಣರಾಗುತ್ತಾರೆ.
ತಮ್ಮ ಮೊದಲ ಪ್ರಯತ್ನದಲ್ಲೇ ಪರೀಕ್ಷೆಯಲ್ಲಿ ತೇರ್ಗಡೆಯಾದಾಗ ಸೃಷ್ಟಿ ದೇಶ್ ಮುಖ್ ಅವರಿಗೆ ಕೇವಲ 23 ವರ್ಷವಾಗಿತ್ತು. ಸೃಷ್ಟಿ ದೇಶ್ ಮುಖ್ ಅವರು ತಮ್ಮ ಬ್ಯಾಚ್ಮೇಟ್ ಡಾ. ನಾಗಾರ್ಜುನ್ ಬಿ ಗೌಡ ಅವರನ್ನು ವಿವಾಹವಾಗಿದ್ದು, ಅವರು ಕೂಡ ಐಎಎಸ್ ಅಧಿಕಾರಿ ಆಗಿದ್ದಾರೆ.
ಪ್ರಸ್ತುತ ಸೃಷ್ಟಿ ದೇಶ್ ಮುಖ್ ಅವರು ಮಧ್ಯಪ್ರದೇಶದ ನರಸಿಂಗ್ಪುರ ಜಿಲ್ಲೆಯ ಗದರ್ವಾರದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಆಗಿ ನೇಮಕಗೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಅವರು ಹೊಂದಿದ್ದಾರೆ. ಈ ಮೂಲಕ ಸೃಷ್ಟಿ ದೇಶ್ ಮುಖ್ ಅವರು ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದೀರುವ ಭಾರತದ ಐಎಎಸ್ ಅಧಿಕಾರಿಯಾಗಿದ್ದಾರೆ.