ಅಮರಾವತಿ, ಜೂ. 12(DaijiworldNews/AA): ತೆಲುಗು ದೇಶಂ(ಟಿಡಿಪಿ) ಪಕ್ಷದ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಇಂದು ಆಂಧ್ರಪ್ರದೇಶದ ಸಿಎಂ ಆಗಿ ನಾಲ್ಕನೇ ಬಾರಿಗೆ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.
ಜೂನ್ 11ರಂದು ರಾಜ್ಯಪಾಲ ಅಬ್ದುಲ್ ನಜೀರ್ ಅವರು ಚಂದ್ರಬಾಬು ನಾಯ್ಡು ಅವರಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ವ್ಯಾಪಕ ಭದ್ರತೆ ಕಲ್ಪಿಸಲಾಗಿದ್ದು, 3 ಪಕ್ಷಗಳ ಒಂದಕ್ಕಿಂತ ಹೆಚ್ಚು ಲಕ್ಷ ಕಾರ್ಯಕರ್ತರು ಮತ್ತು ಕೇಡರ್ ಈ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಆಂಧ್ರಪ್ರದೇಶ ಸರ್ಕಾರದ ಸಚಿವರಾಗಿ ಜನಸೇನಾ ಪಕ್ಷದ ಮುಖ್ಯಸ್ಥ, ನಟ ಪವನ್ ಕಲ್ಯಾಣ್ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಪವನ್ ಕಲ್ಯಾಣ್ ಜೊತೆಗೆ ಟಿಡಿಪಿ ಮುಖ್ಯಸ್ಥರ ಪುತ್ರ ನಾರಾ ಲೋಕೇಶ್ ಸೇರಿದಂತೆ 22 ಮಂದಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಿನ್ನೆ ನಡೆದ ಪ್ರತ್ಯೇಕ ಸಭೆಗಳಲ್ಲಿ ತೆಲುಗು ದೇಶಂ ಶಾಸಕಾಂಗ ಪಕ್ಷ ಮತ್ತು ಎನ್ಡಿಎ ಪಾಲುದಾರರು ಚಂದ್ರಬಾಬು ನಾಯ್ಡು ಅವರನ್ನು ತಮ್ಮ ನಾಯಕನನ್ನಾಗಿ ಆಯ್ಕೆ ಮಾಡಿದ್ದರು.
ಈ ಬಾರಿ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ 175 ಸ್ಥಾನಗಳ ಪೈಕಿ 135 ಸ್ಥಾನಗಳನ್ನು ಟಿಡಿಪಿ ಗೆದ್ದಿದೆ. ಈ ಮೂಲಕ ಟಿಡಿಪಿ ಸಂಪೂರ್ಣ ಬಹುಮತ ಸಾಧಿಸಿಸುವಲ್ಲಿ ಯಶಸ್ವಿಯಾಗಿದೆ.