ದೆಹಲಿ, ಜೂ. 14(DaijiworldNews/AA): ಲೋಕಸಭಾ ಚುನಾವಣೆಯ ಬೆನ್ನಲ್ಲೇ ಜೂನ್ 24ರಿಂದ ಸಂಸತ್ ಅಧಿವೇಶನ ಪ್ರಾರಂಭವಾಗಲಿದೆ. ಅಧಿವೇಶನ ಪ್ರಾರಂಭವಾಗಿ 2 ದಿನಗಳ ಬಳಿಕ ಅಂದರೆ ಜೂನ್ 26ಕ್ಕೆ ಲೋಕಸಭಾ ಸ್ಪೀಕರ್ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಅಭ್ಯರ್ಥಿಗಳನ್ನು ಬೆಂಬಲಿಸುವ ಪತ್ರವನ್ನು ಜೂನ್ 25ರ ಮಧ್ಯಾಹ್ನ 12 ಗಂಟೆಯೊಳಗೆ ಸಲ್ಲಿಸಬಹುದು ಎಂದು ಲೋಕಸಭಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಸ್ಪೀಕರ್ ಸ್ಥಾನಕ್ಕೆ ಸರ್ಕಾರ ಇನ್ನೂ ಯಾವುದೇ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಈ ಹಿನ್ನಲೆ ಸರ್ಕಾರದ ನಡೆ ಕುತೂಹಲಕ್ಕೆ ಕಾರಣವಾಗಿದೆ. ಜೂನ್ 24ರಿಂದ ಆರಂಭಗೊಳ್ಳುವ ಈ ಅಧಿವೇಶನವು ಜುಲೈ 3ಕ್ಕೆ ಮುಕ್ತಾಯಗೊಳ್ಳಲಿದೆ.
ಅಭ್ಯರ್ಥಿಗಳನ್ನು ಬೆಂಬಲಿಸುವ ಪತ್ರವನ್ನು ಚುನಾವಣೆ ನಡೆಯುವ ಮಧ್ಯಾಹ್ನ 12ಗಂಟೆಯೊಳಗೆ ಸೆಕ್ರೇಟರಿ ಜನರಲ್ಗೆ ಲಿಖಿತ ರೂಪದಲ್ಲಿ ನೀಡುವುದು ವಾಡಿಕೆಯಾಗಿದೆ. ಆದರೆ ಈ ಬಾರಿ ಒಂದು ದಿನ ಮುಂಚಿತವಾಗಿಯೇ ಬೆಂಬಲ ಪತ್ರ ನೀಡಬೇಕು. ನೂತನವಾಗಿ ಆಯ್ಕೆಯಾದ ಸದಸ್ಯರ ಪ್ರಮಾಣ ವಚನ ಸ್ವೀಕಾರಕ್ಕೆ ಮೊದಲೆರಡು ದಿನ ಮೀಸಲಾಗಿದ್ದರೆ, ಜೂನ್ 26ಕ್ಕೆ ಸ್ಪೀಕರ್ ಆಯ್ಕೆಗೆ ದಿನಾಂಕ ನಿಗದಿ ಪಡಿಸಲಾಗಿದೆ.