ಹುಬ್ಬಳ್ಳಿ, ಜೂ. 15(DaijiworldNews/AA): ಬಿಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣದಲ್ಲಿ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲೇ ನೋಟಿಸ್ ಕೊಟ್ಟು, ಲೋಕಸಭಾ ಚುನಾವಣೆ ಮುಗಿದು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿರುವ ಸಮಯದಲ್ಲಿ ಹೀಗೆ ಮಾಡಿದ್ದಾರೆ. ಯಡಿಯೂರಪ್ಪ ನಮ್ಮ ಪಕ್ಷದ ವರಿಷ್ಟರು. ಸಂಸದೀಯ ಮಂಡಳಿ ಮೆಂಬರ್ ಆಗಿ ದೆಹಲಿಯಲ್ಲಿ ಇರುವುದು ಸಹಜ. ಅವರಿಗೆ ಜಾಮೀನು ರಹಿತ ವಾರೆಂಟ್ ಹೊರಡಿಸಿದ್ದು ತಪ್ಪು ಎಂದು ಹೈಕೋರ್ಟ್ ತೀರ್ಪು ನೀಡಿದೆ. ರಾಜ್ಯ ಸರ್ಕಾರವೇ ಇದರ ಸೂತ್ರಧಾರಿ ಎಂದು ಹೇಳಿದರು.
ಈ ಎಲ್ಲ ಬೆಳವಣಿಗೆಯ ಬಳಿಕ ಇದು ರಾಹುಲ್ ಗಾಂಧಿ ಒತ್ತಡದ ಮೇಲೆ ನಡೆದಿದೆ ಎಂಬುದು ಸ್ಪಷ್ಟವಾಗಿದೆ. ಸಿದ್ದರಾಮಯ್ಯ ಅವರು ತಮ್ಮ ಖುರ್ಚಿ ಉಳಿಸಿಕೊಳ್ಳಲು ಅತ್ಯಂತ ನಮ್ಮ ವರಿಷ್ಟರಾದ ಯಡಿಯೂರಪ್ಪರನ್ನು ಬಂಧಿಸುವ ಮೂಲಕ ಸೇಡಿನ ರಾಜಕಾರಣಕ್ಕೆ ಕಾಂಗ್ರೆಸ್ ಸರ್ಕಾರ ಮುಂದಾಗಿತ್ತು. ಆದರೆ, ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಬಲವಾಗಿದೆ ಎಂದರು.