ಬೆಂಗಳೂರು, ಜೂ. 15(DaijiworldNews/AA): ದಿನ ಬಳಕೆ ಹಾಗೂ ಅಗತ್ಯ ವಸ್ತುಗಳ ಬೆಲೆಗಳನ್ನು ಸರಣಿ ರೂಪದಲ್ಲಿ ಏರಿಸುತ್ತಲೇ ಇದ್ದೀರಿ. ಇದೀಗ ಪೆಟ್ರೋಲ್ 3ರೂ. ಹಾಗೂ ಡೀಸೆಲ್ ಮೇಲೆ 3.50 ರೂ. ದರ ಏರಿಸಿ ಜನಸಾಮಾನ್ಯರ ಕೈ ಸುಟ್ಟಿದ್ದೀರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕಿಡಿಕಾರಿದ್ದಾರೆ.
ಪೆಟ್ರೋಲ್, ಡೀಸೆಲ್ ದರ ಏರಿಕೆಯನ್ನು ಖಂಡಿಸಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಕಾಂಗ್ರೆಸ್ ಸರ್ಕಾರ ಯಾವ ಭಾಗ್ಯವನ್ನು ಕೊಡದಿದ್ದರೂ ಪರವಾಗಿಲ್ಲ, ಬೆಲೆ ಏರಿಕೆಯ ದೌರ್ಭಾಗ್ಯವನ್ನು ಮಾತ್ರ ನಮ್ಮ ಮೇಲೆ ಹೇರಬೇಡಿ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರಕ್ಕೇರುವ ಒಂದೇ ಕಾರಣಕ್ಕಾಗಿ ಪಂಚ ಭಾಗ್ಯದ ಮೋಡಿ ಮಾಡಿದ್ದೀರಿ. ಈ ಮೂಲಕ ನೀವು ರಾಜ್ಯದ ಮತದಾರರನ್ನು ದಿಕ್ಕು ತಪ್ಪಿಸಿದ್ದು ನಾಡಿನ ದೌರ್ಭಾಗ್ಯವಲ್ಲದೇ ಬೇರೇನೂ ಅಲ್ಲ. ರಾಜ್ಯದ ಜನತೆ ನಿಮ್ಮ ಬಳಿ ಯಾವ ಭಾಗ್ಯವನ್ನು ಬೇಡಿರಲಿಲ್ಲ ಎಂದು ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಬೆಲೆ ಏರಿಕೆಯ ಪ್ರತಿಕೂಲ ಪರಿಣಾಮ ಸಹಜವಾಗಿಯೇ ಸರಕು ಸಾಗಾಣಿಕೆ, ಹಾಗೂ ಸಾರಿಗೆ ದರಗಳೂ ವಿಪರೀತ ಹೆಚ್ಚಳವಾಗಲಿದೆ. ಇದರಿಂದ ದಿನಬಳಕೆಯ ಅಗತ್ಯ ವಸ್ತುಗಳ ಬೆಲೆಯೂ ಏರಲಿದೆ. ಬರಿದಾಗಿರುವ ನಿಮ್ಮ ಖಜಾನೆ ತುಂಬಿಸಲು ಜನಸಾಮಾನ್ಯರು ಹಾಗೂ ಕಡು ಬಡವರ ಜೇಬು ಖಾಲಿ ಮಾಡಲು ಹೊರಟಿದ್ದೀರಿ. ನಿಮ್ಮ ಜನ ವಿರೋಧಿ ನೀತಿ ನಿರ್ಧಾರಗಳನ್ನು ಬಿಜೆಪಿ ಪ್ರಬಲವಾಗಿ ಖಂಡಿಸಿ ಪ್ರತಿಭಟಿಸುತ್ತದೆ. ಈ ಕೂಡಲೇ ಪೆಟ್ರೋಲ್ ಡೀಸೆಲ್ ದರ ಏರಿಕೆ ನಿರ್ಧಾರವನ್ನು ಸರ್ಕಾರ ಹಿಂತೆಗೆದುಕೊಳ್ಳದಿದ್ದರೆ ಜನಾಕ್ರೋಶವನ್ನು ಪ್ರತಿನಿಧಿಸಿ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.